ಅನಂತಪುರ: ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ವೀಕ್ಷಣೆಗೆ ತೆರಳಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಚಿತ್ರಮಂದಿರದಲ್ಲೇ ಆತನ ಮೃತದೇಹ ಪತ್ತೆಯಾಗಿದೆ.
ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ರಾಯದುರ್ಗಂ ಮಂಡಲದ ಪ್ಯಾಲೆಸ್ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, 'ಪುಷ್ಪ 2 ದಿ ರೂಲ್' ಚಿತ್ರ ನೋಡಲು ಹೋಗಿದ್ದ ವ್ಯಕ್ತಿಯ ಮೃತದೇಹ ಚಿತ್ರಮಂದಿರದಲ್ಲಿ ಪತ್ತೆಯಾಗಿದೆ. ವ್ಯಕ್ತಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಲ್ಯಾಣದುರ್ಗ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮೃತ ವ್ಯಕ್ತಿಯನ್ನು ಉಡೆಗೊಲ್ಲಂ ಗ್ರಾಮದ ನಿವಾಸಿ 40 ವರ್ಷದ ಮುದ್ದಣ್ಣಪ್ಪ ಎಂದು ಗುರುತಿಸಲಾಗಿದೆ. ನಾಲ್ಕು ಮಕ್ಕಳ ತಂದೆಯಾಗಿರುವ ಮುದಣ್ಣಪ್ಪ, ಕುಡಿತದ ಚಟ ಹೊಂದಿದ್ದರು. ನಟ ಅಲ್ಲು ಅರ್ಜುನ್ ಅಭಿಮಾನಿಯಾಗಿದ್ದ ಮುದ್ದಣಪ್ಪ ಮ್ಯಾಟಿನಿ ಶೋಗಾಗಿ ಮಧ್ಯಾಹ್ನ 2.30ಕ್ಕೆ ಪ್ಯಾಲೆಸ್ ಚಿತ್ರಮಂದಿರಕ್ಕೆ ಆಗಮಸಿದ್ದರು. ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದಾಗಲೂ ಮದ್ಯದ ಅಮಲಿನಲ್ಲಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.
ಸಾವಿನ ಹೊರತಾಗಿಯೂ ಚಿತ್ರ ಪ್ರದರ್ಶನ ಮುಂದುವರೆಸಿದ್ದ ಚಿತ್ರಮಂದಿರ
ಇನ್ನು ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಚಿತ್ರ ಪ್ರದರ್ಶನದ ವೇಳೆಯೇ ಮುದಣ್ಣಪ್ಪ ತಮ್ಮ ಆಸನದಲ್ಲೇ ನಿತ್ರಾಣರಾಗಿದ್ದು, ಈ ವೇಳೆ ಸಹ ವೀಕ್ಷಕರು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದಾಗ್ಯೂ ಚಿತ್ರಮಂದಿರದ ಸಿಬ್ಬಂದಿ ಚಿತ್ರ ಪ್ರದರ್ಶನ ಮುಂದುವರೆಸಿದ್ದರು. ಬಳಿಕ ಸಂಜೆ 6 ಗಂಟೆ ವೇಳೆಗೆ ಮುಂದಿನ ಪ್ರದರ್ಶನಕ್ಕೆ ಚಿತ್ರ ಮಂದಿರ ಸ್ವಚ್ಛಗೊಳಿಸಲು ಸ್ವಚ್ಛತಾ ಸಿಬ್ಬಂದಿ ಬಂದಾಗ ಮುದಣ್ಣಪ್ಪ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಅವರ ಸಾವು ಯಾವಾಗ ಸಂಭವಿಸಿದೆ ಎಂಬುದು ತಿಳಿದು ಬಂದಿಲ್ಲ ಎಂದು ಕಲ್ಯಾಣದುರ್ಗಂ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ರವಿಬಾಬು ತಿಳಿಸಿದ್ದಾರೆ.
ಕುಟುಂಬಸ್ಥರ ಗಲಾಟೆ
ಈ ನಡುವೆ ಮುದಣ್ಣಪ್ಪ ಸಾವಿನ ವಿಚಾರ ತಿಳಿಯುತ್ತಲೇ ಥಿಯೇಟರ್ ನತ್ತ ಆಗಮಿಸಿದ ಆತನ ಕುಟುಂಬಸ್ಥರು ಚಿತ್ರಮಂದಿರ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗಲಾಟೆ ಮಾಡಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ತಿಳಿಸಿಗೊಳಿಸಿದ್ದು, ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.