ನವದೆಹಲಿ: ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರ ಕಿರುಕುಳದಿಂದ ಬೇಸತ್ತು ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇಶವ್ಯಾಪಿ ಚರ್ಚೆಯಾಗುತ್ತಿದೆ.
ಈ ಪ್ರಕರಣದ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು...
"ಮಹಿಳೆಯರ ರಕ್ಷಣೆಗಾಗಿ ಇರುವ "ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಿರುಕುಳ ವಿರೋಧಿಯಂತಹ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಸಹ ಕಳವಳ ವ್ಯಕ್ತಪಡಿಸಿದೆ".
ಹಲವು ಪ್ರಕರಣಗಳಲ್ಲಿ ಇಂತಹ ಕಾನೂನುಗಳು ದುರುಪಯೋಗುವುದರ ವಿರುದ್ಧ ಸುಪ್ರೀಂ ಕೋರ್ಟ್ ರಕ್ಷಣೆಯನ್ನು ಒದಗಿಸಲು ಯತ್ನಿಸಿದೆ. ಆದರೂ, ಸ್ಥಳೀಯ ನ್ಯಾಯಾಲಯಗಳ ಮಟ್ಟದಲ್ಲಿ ವಿಳಂಬ, ನಿಂದನೆಯ ಸಾಧ್ಯತೆಗಳು, ಪ್ರಕರಣಗಳಲ್ಲಿ ದಾವೆ ಹೂಡಿರುವವರ ಕಿರುಕುಳಗಳು ಬೆಂಗಳೂರಿನಲ್ಲಿ ನಡೆದಂತಹ ಘಟನೆಗಳಂತಹ ದುರದೃಷ್ಟಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದ್ದಾರೆ.
"ದೀರ್ಘಾವಧಿಯಿಂದ ಬಾಕಿ ಇರುವ ಪ್ರಕರಣಗಳು ಇತ್ಯರ್ಥಗೊಳಿಸುವ ಉದ್ದೇಶದಿಂದ 3 ಕ್ರಿಮಿನಲ್ ಜಸ್ಟಿಸ್ ಕಾನೂನುಗಳನ್ನು ಪರಿಚಯಿಸಿದೆ. ಆದರೆ ಕ್ಷಿಪ್ರ ನ್ಯಾಯದಾನಕ್ಕಾಗಿ ಇನ್ನೂ ಹೆಚ್ಚಿನದ್ದನ್ನು ಮಾಡಬೇಕಿದೆ" ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಕೌಟುಂಬಿಕ ವ್ಯಾಜ್ಯಗಳಿಗೆ ಸಂಬಂಧಿಸಿದ ಹಲವು ಕಾನೂನುಗಳನ್ನು ಮರುಪರಿಶೀಲನೆ ಮಾಡಿ, ಅಗತ್ಯವಿರುವೆಡೆ, ಲಿಂಗ ಸಮಾನತೆಯ ಅಂಶವನ್ನು ಜಾರಿಗೊಳಿಸುವ ಕಾಲ ಬಂದಿದೆ ಎಂದು ಭಾವಿಸುತ್ತೇನೆ, ಇದರಿಂದಾಗಿ ವೈವಾಹಿಕ ಸಂಬಂಧಗಳಲ್ಲಿ ಇಬ್ಬರಿಗೂ ರಕ್ಷಣೆ ಇರುವಂತಾಗಲಿದೆ. ಕುಟುಂಬಗಳು ಸಮಾಜದ ಅಡಿಪಾಯವಾಗಿದೆ. ಒಬ್ಬರಿಂದ ದುರುಪಯೋಗವಾಗುವಂತಹ ಕಾನೂನುಗಳು ಕೌಟುಂಬಿಕ ವ್ಯವಸ್ಥೆಯನ್ನೇ ನಾಶ ಮಾಡಬಹುದಾಗಿದ್ದು, ಸಾಮಾಜಿಕವಾಗಿ ಪ್ರಬಲ ಪರಿಣಾಮಗಳನ್ನುಂಟುಮಾಡುತ್ತವೆ ಎಂದು ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನ್ಯಾಯಾಲಯಗಳ ಕಾರ್ಯನಿರ್ವಹಣೆ ರೀತಿಯೂ ಕಳವಳಕ್ಕೆ ಕಾರಣವಾಗಿದೆ ಎಂದು ಸೂರ್ಯ ಹೇಳಿದರು.
"3 ಕ್ರಿಮಿನಲ್ ಜಸ್ಟಿಸ್ ಕಾನೂನುಗಳನ್ನು ಪರಿಚಯಿಸುವಾಗ ಸ್ವತಃ ಗೃಹ ಸಚಿವರು ಈ ಬಗ್ಗೆ ಮಾತನಾಡಿದ್ದು, ಒಟ್ಟಾರೆ ನ್ಯಾಯಾಂಗದ ಸುಧಾರಣೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದರು. ಸಮತೋಲನದ, ನಿಷ್ಪಕ್ಷಪಾತ, ತನಿಖೆಯಲ್ಲಿ ಸಮಗ್ರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಸ್ಥಳೀಯ ನ್ಯಾಯಾಲಯಗಳಲ್ಲಿ ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದ್ದರು. ಈ ದಿಶೆಯಲ್ಲಿ 3 ಕ್ರಿಮಿನಲ್ ಜಸ್ಟಿಸ್ ಕಾನೂನುಗಳು ಸುಧಾರಣೆಯೆಡೆಗೆ ಮೊದಲ ಹೆಜ್ಜೆಯಾಗಿವೆ, ಆದರೆ ಸಮಸ್ಯೆಗಳನ್ನು ಬಗೆಹರಿಸಲು ಸಮಾಜವಾಗಿ ಒಟ್ಟಾಗಿ ನಾವು ಇನ್ನೂ ಹೆಚ್ಚಿನದ್ದನ್ನು ಮಾಡಬೇಕಿದೆ" ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.