ಚೆನ್ನೈ: ನೈಋತ್ಯ ರೈಲ್ವೆ (SWR) ಹಾಗೂ ರೈಲ್ವೆ ಮಂಡಳಿಯ ಅನುಮೋದನೆಯ ನಂತರ ಚೆನ್ನೈ-ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಬರುವ ಜನವರಿ 3 ರಿಂದ ಸೂಪರ್‌ಫಾಸ್ಟ್‌ನಿಂದ ಸಾಮಾನ್ಯ ಎಕ್ಸ್‌ಪ್ರೆಸ್ ಆಗಿ ಕೆಳದರ್ಜೆಗೆ ಇಳಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾದ ನಿಲುಗಡೆಯ ಹೆಚ್ಚಳದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದು ರೈಲಿನ ಸರಾಸರಿ ವೇಗದ ಮೇಲೆ ಪರಿಣಾಮ ಬೀರಿದೆ.
ಕನಿಷ್ಠ 55 ಕಿಲೋ ಮೀಟರ್ ಸರಾಸರಿ ವೇಗವನ್ನು ನಿರ್ವಹಿಸಲು ವಿಫಲವಾದ ರೈಲುಗಳನ್ನು ಮರುವರ್ಗೀಕರಿಸಲು ವಿಶಾಲವಾದ ರೈಲ್ವೆ ಉಪಕ್ರಮದ ಹಿನ್ನೆಲೆಯಲ್ಲಿ ಚೆನ್ನೈ-ಮೈಸೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ನ್ನು ಕೆಳದರ್ಜೆಗೆ ಇಳಿಸಲಾಗಿದೆ. ಪ್ರಯಾಣಿಕರು, ಸಂಸದರು, ಶಾಸಕರು, ವ್ಯಾಪಾರಿ ಸಂಘಟನೆಗಳು ಮತ್ತು ಇತರ ಪ್ರತಿನಿಧಿಗಳ ಬೇಡಿಕೆಗಳಿಗೆ ಅನುಗುಣವಾಗಿ ಕಾಲಾನಂತರದಲ್ಲಿ ಪರಿಚಯಿಸಲಾದ ಹೆಚ್ಚುವರಿ ಮಾರ್ಗದ ನಿಲುಗಡೆಗೆ ರೈಲು ಸಂಚಾರದ ವೇಗ ಕಡಿತ ಕಾರಣವಾಗಿದೆ.
ಇನ್ನೂ ನಾಲ್ಕು ರೈಲುಗಳು ಜನವರಿಯಲ್ಲಿ ಇದೇ ರೀತಿ ಕೆಳದರ್ಜೆಗೆ ಇಳಿಯಲಿದೆ ಎಂದು ಅಧಿಕೃತ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. ಪ್ರಯಾಣದ ದರ ಕಡಿತವಾಗಲಿದೆ. ಚೆನ್ನೈ-ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ, ಟಿಕೆಟ್ ದರಗಳು ಎರಡನೇ ಸಿಟ್ಟಿಂಗ್‌ಗೆ 15 ರೂಪಾಯಿ ಮತ್ತು ಚೇರ್ ಕಾರ್ ದರ್ಜೆಗೆ 45 ರೂಪಾಯಿಗಳಷ್ಟು ಕಡಿಮೆಯಾಗುತ್ತವೆ. ಹೆಚ್ಚುವರಿಯಾಗಿ, ತಿರುಪತ್ತೂರ್, ವೆಲ್ಲೂರು ಮತ್ತು ರಾಣಿಪೇಟ್‌ನಂತಹ ಜಿಲ್ಲೆಗಳಲ್ಲಿನ ಪ್ರಯಾಣಿಕರು ಸೂಪರ್‌ಫಾಸ್ಟ್ ಸೀಸನ್ ಟಿಕೆಟ್‌ಗಳಿಗಿಂತ 150 ರೂಪಾಯಿ ಕಡಿಮೆ ಬೆಲೆಯ ಎಕ್ಸ್‌ಪ್ರೆಸ್ ಸೀಸನ್ ಟಿಕೆಟ್‌ಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ.
ಚೆನ್ನೈ-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಗೆ ಜನವರಿ 3 ರಿಂದ 12609/12610 ರಿಂದ 16551/16552 ಎಂದು ಮರುಸಂಖ್ಯೆ ನೀಡಲಾಗುತ್ತದೆ. ರೈಲು ಪ್ರಸ್ತುತ ಚೆನ್ನೈ ಸೆಂಟ್ರಲ್‌ನಿಂದ ಮಧ್ಯಾಹ್ನ 1.35 ಕ್ಕೆ ಹೊರಡುತ್ತದೆ, ರಾತ್ರಿ 7.55 ಕ್ಕೆ ಬೆಂಗಳೂರು ತಲುಪುತ್ತದೆ. ರಾತ್ರಿ 10.50 ಕ್ಕೆ ಮೈಸೂರಿಗೆ ಆಗಮಿಸುತ್ತದೆ, 23 ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. 497 ಕಿಮೀ ದೂರವನ್ನು ಒಂಬತ್ತು ಗಂಟೆ 15 ನಿಮಿಷಗಳಲ್ಲಿ ಕ್ರಮಿಸುವ ಈ ರೈಲು ಸರಾಸರಿ 54 ಕಿಮೀ/ಗಂಟೆಗೆ ವೇಗವನ್ನು ಕಾಯ್ದುಕೊಳ್ಳುತ್ತದೆ. ಆರಂಭದಲ್ಲಿ ಚೆನ್ನೈ ಮತ್ತು ಬೆಂಗಳೂರು ನಡುವೆ ಕಾರ್ಯಾಚರಿಸುತ್ತಿದ್ದ ಇದನ್ನು 2019 ರ ಜನವರಿಯಲ್ಲಿ ಮೈಸೂರಿಗೆ ವಿಸ್ತರಿಸಲಾಯಿತು.