ನವದೆಹಲಿ: ಶ್ರೀಲಂಕಾ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಅವರು ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಮೊದಲ ವಿದೇಶಿ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿಯಾದರು. ಮುಂದಿನ ತಿಂಗಳು ಚೀನಾಕ್ಕೆ ತೆರಳಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಅವರ ಸಭೆಯಲ್ಲಿ 4 ಬಿಲಿಯನ್ ಡಾಲರ್ ಆರ್ಥಿಕ ಸಹಾಯಕ್ಕಾಗಿ ಭಾರತಕ್ಕೆ ದಿಸ್ಸಾನಾಯಕೆ ಧನ್ಯವಾದ ಹೇಳಿದರು. ಶ್ರೀಲಂಕಾದ ಸಾಲ ಪುನರ್ ರಚನೆ ಪ್ರಕ್ರಿಯೆಯಲ್ಲಿ ಭಾರತದ ಬೆಂಬಲವನ್ನು ಒಪ್ಪಿಕೊಂಡರು.
ಪ್ರಧಾನಿ ಮೋದಿ ಅವರನ್ನು ಸೋಮವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ದಿಸ್ಸಾನಾಯಕೆ, "ನನ್ನ ಮೊದಲ ವಿದೇಶ ಭೇಟಿಯಲ್ಲಿ ದೆಹಲಿಗೆ ಬರಲು ಸಂತೋಷವಾಗಿದೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಭಾರತಕ್ಕೆ ಧನ್ಯವಾದ ಹೇಳುತ್ತೇನೆ. ಈ ಭೇಟಿಯು ನಮ್ಮ ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.
ಶ್ರೀಲಂಕಾದ ಸಾಲ ಪುನರ್ ರಚನೆ ಪ್ರಕ್ರಿಯೆಯಲ್ಲಿ ಭಾರತದ ನಿರ್ಣಾಯಕ ನೆರವು ಮತ್ತು 20. 66 ಮಿಲಿಯನ್ ಡಾಲರ್ ಆರ್ಥಿಕ ನೆರವಿನ ವಿಸ್ತರಣೆಗಾಗಿ ಭಾರತಕ್ಕೆ ಧನ್ಯವಾದ ತಿಳಿಸಿದ ದಿಸಾನಾಯಕೆ, ಇದರಿಂದ ಸಂಕಷ್ಟದ ಸಮಯದಲ್ಲಿ ಸಾಲದ ಹೊರೆ ಕಡಿಮೆಯಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ದಿಸ್ಸಾನಾಯಕೆ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಭೇಟಿಗಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ತಮ್ಮಗೆ ಸಂತಸವನ್ನುಂಟು ಮಾಡಿದೆ. ನಮ್ಮ ಪಾಲುದಾರಿಕೆಗೆ ಭವಿಷ್ಯದ ದೃಷ್ಟಿಕೋನವಿದೆ. ಮೀನುಗಾರರ ಸಮಸ್ಯೆಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಹರಿಸಲಾಗುವುದು ಮತ್ತು ಶ್ರೀಲಂಕಾ ಸರ್ಕಾರ ತಮಿಳು ಜನರ ಆಶೋತ್ತರ ಪೂರೈಸುತ್ತದೆ ಮತ್ತು ಪ್ರಾಂತೀಯ ಕೌನ್ಸಿಲ್ ಚುನಾವಣೆ ನಡೆಸುವ ವಿಶ್ವಾಸವಿದೆ ಎಂದು ಹೇಳಿದರು.