ನಾಗ್ಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗುರುವಾರ ಬೆಳಗ್ಗೆ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೆ.ಬಿ.ಹೆಡ್ಗೆವಾರ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಆರ್‌ಎಸ್‌ಎಸ್‌ನ ಎರಡನೇ ಸರ್ ಸಂಘಚಾಲಕ್ ಎಂಎಸ್ ಗೋಲ್ವಾಲ್ಕರ್ ಅವರ ಸ್ಮಾರಕಕ್ಕೂ ಸಿಎಂ, ಡಿಸಿಎಂ ಗೌರವ ಸಲ್ಲಿಸಿದರು.
ರಾಜ್ಯ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್, ಪರಿಷತ್ ಉಪ ಸಭಾಪತಿ ನೀಲಂ ಗೊರ್ಹೆ ಮತ್ತು ಆಡಳಿತಾರೂಢ ಬಿಜೆಪಿ ಹಾಗೂ ಶಿಂಧೆ ನೇತೃತ್ವದ ಶಿವಸೇನೆಯ ವಿವಿಧ ಶಾಸಕರು ಡಾ. ಹೆಡ್ಗೆವಾರ್ ಮತ್ತು ಗೋಳ್ವಾಲ್ಕರ್ ಅವರ ಸ್ಮಾರಕಗಳಿಗೆ ಗೌರವ ಸಲ್ಲಿಸಿದರು.
ಇದೇ ವೇಳೆ ಫಡ್ನವಿಸ್ ಮತ್ತು ಶಿಂಧೆ ಅವರು ಸಂಘದ ಪದಾಧಿಕಾರಿಗಳನ್ನು ಭೇಟಿಯಾದರು. ಅವರು ಆರ್‌ಎಸ್‌ಎಸ್‌ನ ಸಂಕ್ಷಿಪ್ತ ಪರಿಚಯ ನೀಡಿದರು.
ಸದ್ಯ ನಾಗ್ಪುರದಲ್ಲಿ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ.