ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಹಾಗೂ ಹರಿಯಾಣ ರಾಜ್ಯ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ (89) ಅವರು ಶುಕ್ರವಾರ ಗುರುಗ್ರಾಮದಲ್ಲಿ ನಿಧನರಾಗಿದ್ದಾರೆ.
ಗುರುಗ್ರಾಮದ ಸ್ವಗೃಹದಲ್ಲಿ ಹೃದಯ ಸ್ತಂಭನದಿಂದ ಓಂ ಪ್ರಕಾಶ್ ಚೌಟಾಲಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾರತದ ಮಾಜಿ ಉಪ ಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರ ಓಂ ಪ್ರಕಾಶ್ ಚೌಟಾಲಾ ಅವರು ಹರಿಯಾಣದ 5ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
27 ಮೇ 2022 ರಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ನ್ಯಾಯಾಲಯವು 16 ವರ್ಷಗಳಷ್ಟು ಹಳೆಯದಾದ ಅಕ್ರಮ ಆಸ್ತಿ ಪ್ರಕರಣದಲ್ಲಿ ಚೌಟಾಲಾ ಅವರಿಗೆ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅವರನ್ನು 2020 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಓಂ ಪ್ರಕಾಶ್ ಅವರ ಪತ್ನಿ ಸ್ನೇಹ ಲತಾ ಅವರು ಆಗಸ್ಟ್ 2019 ರಲ್ಲಿ ನಿಧನರಾಗಿದ್ದರು.
ಈ ದಂಪತಿಗೆ ಅಭಯ್ ಸಿಂಗ್ ಮತ್ತು ಅಜಯ್ ಸಿಂಗ್ ಸೇರಿದಂತೆ ಮೂವರು ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಅಭಯ್ ಸಿಂಗ್ ಚೌಟಾಲಾ ಅವರು ಹರಿಯಾಣದ ಎಲೆನಾಬಾದ್ ಕ್ಷೇತ್ರದ ಶಾಸಕರಾಗಿದ್ದಾರೆ.. ಅಲ್ಲದೇ ಅಕ್ಟೋಬರ್ 2014 ರಿಂದ ಮಾರ್ಚ್ 2019 ರವರೆಗೆ ಹರಿಯಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗ, ದುಶ್ಯಂತ್ ಅವರು ಜನತಾ ಪಕ್ಷದ ನಾಯಕರಾಗಿದ್ದಾರೆ ಮತ್ತು ಹರಿಯಾಣದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಹಿಸಾರ್ ಕ್ಷೇತ್ರದಿಂದ ಲೋಕಸಭೆಯ ಮಾಜಿ ಸಂಸದರೂ ಆಗಿದ್ದಾರೆ.