ಕೋಲ್ಕತ್ತಾ: ದೇಶಾದ್ಯಂತ ಭಾರಿ ಆಕ್ರೋಶ ಮತ್ತು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ತಪ್ಪೊಪ್ಪಿಕೊಂಡಿಲ್ಲ ಎಂದು ಅವರ ವಕೀಲರು ಶನಿವಾರ ಹೇಳಿದ್ದಾರೆ.
ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ರಕ್ತಸಿಕ್ತ ಮೃತದೇಹ ಪತ್ತೆಯಾಗಿತ್ತು. ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಸಂಜಯ್ ರಾಯ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ಏಕೈಕ ಆರೋಪಿ ಸಂಜೋಯ್ ರಾಯ್(33) ಶುಕ್ರವಾರ ಕೋಲ್ಕತ್ತಾದ ಮುಚ್ಚಿದ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ತಾನು ನಿರ್ದೋಷಿ ಎಂದು ಒಪ್ಪಿಕೊಂಡಿರುವುದಾಗಿ ಆರೋಪಿ ಪರ ವಕೀಲ ಸೌರವ್ ಬಂಡೋಪಾಧ್ಯಾಯ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.
"ನಾನು ತಪ್ಪಿತಸ್ಥನಲ್ಲ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ" ಎಂದು ರಾಯ್ ನ್ಯಾಯಾಲಯಕ್ಕೆ ತಿಳಿಸಿದರು ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ನಾಗರಿಕ ಸ್ವಯಂಸೇವಕರಾಗಿದ್ದ ರಾಯ್ ನನ್ನು ಕೊಲೆಯ ಮರುದಿನ ಬಂಧಿಸಲಾಯಿತು ಮತ್ತು ಅಂದಿನಿಂದ ಜೈಲಿನಲ್ಲಿ ಇರಿಸಲಾಗಿದೆ. ತಪ್ಪಿತಸ್ಥ ಎಂದು ಸಾಬೀತಾದರೆ ಆರೋಪಿ ಮರಣದಂಡನೆ ಶಿಕ್ಷೆ ಎದುರಿಸಬೇಕಾಗುತ್ತದೆ.
ನ್ಯಾಯಾಲಯವು ನವೆಂಬರ್ 11 ರಂದು ಪ್ರಕರಣದ ವಿಚಾರಣೆ ಆರಂಭಿಸಿದ್ದು, ಸುಮಾರು 50 ಸಾಕ್ಷಿಗಳಿಂದ ಸಾಕ್ಷ್ಯವನ್ನು ಆಲಿಸಿದೆ. ಆದರೆ ಶುಕ್ರವಾರ ರಾಯ್ ನಿಲುವನ್ನು ಪಡೆದುಕೊಳ್ಳಲಾಗಿದೆ.
"ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಆರು ಗಂಟೆಗಳ ಕಾಲ 100 ಕ್ಕೂ ಹೆಚ್ಚು ಪ್ರಶ್ನೆಗಳೊಂದಿಗೆ ಆರೋಪಿಯನ್ನು ಪ್ರಶ್ನಿಸಿದರು. ಅದು ಸಂಜೆಯವರೆಗೂ ಮುಂದುವರೆಯಿತು" ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.