ನವದೆಹಲಿ: ದಾರಿ ತಪ್ಪಿಸುವ ಜಾಹೀರಾತಿಗಾಗಿ ಸುಬ್ರಾ ರಂಜನ್ IAS ಕೋಚಿಂಗ್ ಸಂಸ್ಥೆಗೆ ಕೇಂದ್ರ ಗ್ರಾಹಕ ಹಿತಾರಕ್ಷಣಾ ಪ್ರಾಧಿಕಾರ ರೂ. 2 ಲಕ್ಷ ದಂಡ ವಿಧಿಸಿದೆ. ಜಾಹೀರಾತಿನಲ್ಲಿ ಪ್ರತಿಷ್ಠಿತ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ (CSE) ಯಶಸ್ವಿಯಾದ ವಿದ್ಯಾರ್ಥಿಗಳ ಕೋರ್ಸ್ ವಿವರ ಕುರಿತ ಮಾಹಿತಿಯನ್ನು ಸಂಸ್ಥೆ ಮುಚ್ಚಿಟ್ಟಿರುವುದು ತಿಳಿದುಬಂದಿದೆ.
2023ರ ಯುಪಿಎಸ್ ಸಿ CSE ಪರೀಕ್ಷೆಯಲ್ಲಿ ಟಾಪ್ 100 ರಲ್ಲಿ 13 ವಿದ್ಯಾರ್ಥಿಗಳು, ಟಾಪ್ 200ರಲ್ಲಿ 28 ವಿದ್ಯಾರ್ಥಿಗಳು ಹಾಗೂ ಟಾಪ್ 300 ರಲ್ಲಿ 39 ವಿದ್ಯಾರ್ಥಿಗಳಿದ್ದಾರೆ ಎಂದು ಜಾಹೀರಾತಿನಲ್ಲಿ ಹೇಳಿಕೊಂಡಿದ್ದು, ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳ ಹೆಸರು, ಫೋಟೋವನ್ನು ಪ್ರದರ್ಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯು ತನ್ನ ಜಾಹೀರಾತು ಮತ್ತು ಲೆಟರ್ ಹೆಡ್ ಗಳಲ್ಲಿ 'ಶುಭ್ರ ರಂಜನ್ ಐಎಎಸ್' ಮತ್ತು 'ಶುಭ್ರ ರಂಜನ್ ಐಎಎಸ್ ವಿದ್ಯಾರ್ಥಿಗಳು' ಎಂಬ ಪದಗಳನ್ನು ಬಳಸಿದ್ದು, ಐಎಎಸ್ ಅಧಿಕಾರಿ ಶುಭ ರಂಜನ್ ಅವರ ಹೆಸರಿನಲ್ಲಿ ವಂಚಿಸುವ ಹುನ್ನಾರ ಎನ್ನಲಾಗಿದೆ. ಜಾಹೀರಾತು 2019ರ ಗ್ರಾಹಕ ಹಿತರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಯಶಸ್ವಿ ವಿದ್ಯಾರ್ಥಿಗಳ ಕೋರ್ಸ್ ವಿವರಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ವಂಚಿಸಲಾಗಿದೆ. ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಶುಭ್ರ ರಂಜನ್ IAS ಕೋಚಿಂಗ್ ಸೆಂಟರ್ ಗೆ ಸೂಚಿಸಲಾಗಿದೆ.
2022 ರ CSE ಪರೀಕ್ಷೆ ಫಲಿತಾಂಶ ದಾರಿ ತಪ್ಪಿಸುವ ಜಾಹೀರಾತಿಗಾಗಿ ವಾಜಿರಾವ್ ಮತ್ತು ರೆಡ್ಡಿ ಸಂಸ್ಥೆಗೆ 7 ಲಕ್ಷ ರೂ. ದಂಡವನ್ನು CCPA ವಿಧಿಸಿತು. ದಾರಿ ತಪ್ಪಿಸುವ ಜಾಹೀರಾತುಗಳಿಗಾಗಿ ಇದುವರೆಗೆ ವಿವಿಧ ಕೋಚಿಂಗ್ ಸಂಸ್ಥೆಗಳಿಗೆ 45 ನೋಟಿಸ್ ನೀಡಿದ್ದು, 20 ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಿಗೆ ರೂ 63.60 ಲಕ್ಷ ದಂಡವನ್ನು ವಿಧಿಸಿರುವುದಾಗಿ CCPA ಹೇಳಿದೆ.