ಬಲ್ಲಿಯಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಬಲ್ಲಿಯಾದ ಸ್ಥಳೀಯ ಸಮಾಜವಾದಿ ನಾಯಕರೊಬ್ಬರನ್ನು ಬಂಧಿಸಲಾಗಿದ್ದು, 22 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ವರುಣ್ ಕುಮಾರ್ ರಾಕೇಶ್ ಎಂಬುವರ ನೀಡಿದ ದೂರಿನ ಆಧಾರದ ಮೇಲೆ ಸಮಾಜವಾದಿ ಪಕ್ಷದ ನಾಯಕ ಬಹದೂರ್ ಯಾದವ್ ಮತ್ತಿತರರ ವಿರುದ್ಧ ಭಿಂಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ ಐಆರ್ ದಾಖಲಾಗಿದೆ.
ಬಿಎನ್ ಎಸ್ ಸೆಕ್ಷನ್ 132( ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ) 285 (ಸಾರ್ವಜನಿಕ ರಸ್ತೆಗೆ ಅಪಾಯ) 287( ಬೆಂಕಿ ಅಥವಾ ದಹಿಸುವ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) 292 ( ಸಾರ್ವಜನಿಕ ತೊಂದರೆಗಾಗಿ ಶಿಕ್ಷೆ) ಮತ್ತು352 (ವ್ಯಕ್ತಿಗೆ ಅಪಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆರೋಪಿಗಳು ಡಿಸೆಂಬರ್ 20 ರಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಪ್ರತಿಕೃತಿ ದಹಿಸಿದ್ದು, ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸಮಾಜವಾದಿ ಪಕ್ಷದ ನಾಯಕನನ್ನು ಭಾನುವಾರ ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕಾಗಿ ಹುಡುಕಾಟ ನಡೆಸಲಾಗಿದೆ ಎಂದು ಭಿಂಪುರ ಠಾಣಾಧಿಕಾರಿ ಮದಲ್ ಲಾಲ್ ಪಟೇಲ್ ತಿಳಿಸಿದ್ದಾರೆ.