ಹೈದರಾಬಾದ್: ಪುಷ್ಪ 2 ಚಿತ್ರದ ಕಾಲ್ತುಳಿತ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಿನ್ನೆಯಷ್ಟೇ ನಟ ಅಲ್ಲು ಅರ್ಜುನ್ ಸುದ್ದಿಗೋಷ್ಠಿ ನಡೆಸಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಆದರೆ ಇದರ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಹೌದು.. ಡಿಸೆಂಬರ್ 4 ರಂದು 'ಪುಷ್ಪ-2' ಚಿತ್ರದ ಪ್ರದರ್ಶನದ ಸಮಯದಲ್ಲಿ, ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ ಅವರ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ನಟ ಅಲ್ಲು ಅರ್ಜುನ್ ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತೆಲಂಗಾಣ ವಿಧಾನಸಭೆಯಲ್ಲಿ ಹೇಳಿದ್ದರು. ಉದ್ದೇಶಪೂರ್ವಕವಾಗಿಯೇ ಅಲ್ಲು ಅರ್ಜುನ್ ಕಾಲ್ತುಳಿತದ ಹೊರತಾಗಿಯೂ ಥಿಯೇಟರ್ ನಿಂದ ತೆರಳಲಿಲ್ಲ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅಲ್ಲು ಅರ್ಜುನ್, ಘಟನೆ ದುರಾದೃಷ್ಟಕರ.. ಕಾಲ್ತುಳಿತದ ವಿಚಾರ ತಿಳಿಯುತ್ತಲೇ ನಾನು ಥಿಯೇಟರ್ ನಿಂದ ಹೊರಟು ಹೋದೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಆದರೆ ಇದೀಗ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕಾಲ್ತುಳಿತದ ಕುರಿತು ಮಾಹಿತಿ ನೀಡಿದ್ರೂ ಹೊರಗೆ ಬರಲಿಲ್ಲ
ಸಂಧ್ಯಾ ಥಿಯೇಟರ್ ನಲ್ಲಿ ನಟ ಅಲ್ಲು ಅರ್ಜುನ್ ಗೆ ಕಾಲ್ತುಳಿತದ ಕುರಿತು ಮಾಹಿತಿ ನೀಡಲಾಗಿತ್ತು. ಆದರೂ ಅವರು ಹೊರಗೆ ಹೋಗಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
2024 ರ ವಾರ್ಷಿಕ ಸುತ್ತಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸಿ ವಿ ಆನಂದ್, ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿದಾಗ ಇದ್ದ ಪರಿಸ್ಥಿತಿಯ ಕುರಿತು ಪೊಲೀಸರು ಮಾಡಿದ ವೀಡಿಯೊವನ್ನು ಭಾನುವಾರ ತೋರಿಸಿದರು. ಸುದ್ದಿ ವಾಹಿನಿಗಳು ಮತ್ತು ಸೆಲ್ ಫೋನ್ ಕ್ಲಿಪ್‌ಗಳನ್ನು ಒಳಗೊಂಡಂತೆ ದೃಶ್ಯಗಳನ್ನು ಒಟ್ಟುಗೂಡಿಸಿ ಈ ವೀಡಿಯೊವನ್ನು ಮಾಡಲಾಗಿದೆ. ನಟ ಮಧ್ಯರಾತ್ರಿಯವರೆಗೆ ಥಿಯೇಟರ್‌ನಲ್ಲಿಯೇ ಇದ್ದರು ಎಂದು ಅವರು ಹೇಳಿದ್ದಾರೆ.
ಈ ವಿಡಿಯೋ ನೋಡಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ನೀವೇ ತೀರ್ಮಾನ ಮಾಡಿ ಎಂದು ಹೇಳಿದರು. ವಿಡಿಯೋದಲ್ಲಿ ನಟ ಅಲ್ಲು ಅರ್ಜುನ್ ಪುಷ್ಪ 2 ಚಿತ್ರದಲ್ಲಿನ ಗಂಗಮ್ಮ ಜಾತರ ಹಾಡಿನವರೆಗೂ ಥಿಯೇಟರ್ ನಲ್ಲೇ ಇರುವುದು ಕಂಡುಬಂದಿದೆ. ಅಂದರೆ ಚಿತ್ರ ಆರಂಭವಾಗಿ ಸುಮಾರು 2 ಗಂಟೆಗಳ ಕಾಲ ಚಿತ್ರಮಂದಿರಲ್ಲೇ ಇರುವುದು ಇದರಿಂದ ಖಾತರಿಯಾದಂತಾಗಿದೆ ಎಂದು ಹೇಳಲಾಗಿದೆ.
ಅಲ್ಲು ಅರ್ಜುನ್ ಮೊಂಡಾಟ, ಪೊಲೀಸರಿಂದ ತೀವ್ರ ತರಾಟೆ
ಕಾಲ್ತುಳಿತ ಮತ್ತು ಮಹಿಳೆ ಸಾವಿನ ಕುರಿತು ಮಾಹಿತಿ ನೀಡಿದರೂ ನಟ ಅಲ್ಲು ಅರ್ಜುನ್ ಹಾಡಿನವರೆಗೂ ಇಲ್ಲೇ ಇರುತ್ತೇನೆ ಎಂದು ಮೊಂಡು ತನ ಪ್ರದರ್ಶಿಸಿದರು. ಅಧಿಕಾರಿ ನಟನಿಗೆ ಅವರ ನಿರ್ಗಮನಕ್ಕೆ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಹೇಳಿದರು. ಆದಾಗ್ಯೂ, ಚಿತ್ರ ನೋಡಿದ ನಂತರವೇ ಹೋಗುವುದಾಗಿ ಹೇಳಿದರು.
ಈ ವೇಳೆ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ನೇರವಾಗಿ ಸಂಧ್ಯಾ ಥಿಯೇಟರ್ ನ ಬಾಲ್ಕನಿಗೆ ತೆರಳಿ ನಟ ಅಲ್ಲು ಅರ್ಜುನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿ ಒಂದು ಸಾವಾಗಿದೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.. ಪರಿಸ್ಥಿತಿ ನಿಯಂತ್ರಣ ತಪ್ಪಿದೆ... ಏನು ಓದಿರೋದು ನೀವು.. ಪರಿಸ್ಥಿತಿ ಅರ್ಥವಾಗುವುದಿಲ್ಲವೇ ಎಂದು ಗದರಿದಾಗಷ್ಟೇ ನಟ ಅಲ್ಲು ಅರ್ಜುನ್ ಥಿಯೇಟರ್ ನಿಂದ ಹೊರ ಬಂದರು ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಮತ್ತು ಬೌನ್ಸರ್ ಗಳ ವಿರುದ್ಧ ಕ್ರಮ
ಇದೇ ವೇಳೆ ಸಿನಿಮಾ ಹಾಲ್‌ನಲ್ಲಿ ಕಾಲ್ತುಳಿತ ಸಂಭವಿಸಿದಾಗ ಅಲ್ಲು ಅರ್ಜುನ್ ನೇಮಿಸಿದ ಬೌನ್ಸರ್‌ಗಳು ಜನಸಮೂಹವನ್ನು ಮತ್ತು ಪೊಲೀಸರನ್ನು ತಳ್ಳಿದರು ಎಂಬ ಆರೋಪಗಳಿವೆ. ಬೌನ್ಸರ್‌ಗಳು ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ನಿಜವಾಗಿಯೂ ಕೆಟ್ಟದಾಗಿ ವರ್ತಿಸಿದ್ದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.
ಇದೇ ವೇಳೆ ಅಲ್ಲು ಅರ್ಜುನ್‌ಗೆ ನೀಡಲಾದ ಮಧ್ಯಂತರ ಜಾಮೀನಿನ ವಿರುದ್ಧ ಪೊಲೀಸರು ಮೇಲ್ಮನವಿ ಸಲ್ಲಿಸುತ್ತಾರೆಯೇ ಎಂದು ಕೇಳಿದಾಗ, ಆಯುಕ್ತರು ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು, ಇದು ತನಿಖೆಯ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಯುತ್ತದೆ ಎಂದು ಅವರು ಹೇಳಿದರು.