ಚಂಡೀಗಢ: ಪಂಜಾಬ್‌ನ ಗ್ರಾಮ ಪಂಚಾಯಿತಿಯೊಂದು ನಾಗರಿಕ ಸೇವಾ ಪರೀಕ್ಷೆಗಳಿಗೆ ಹಾಜರಾಗುವ, ಸಶಸ್ತ್ರ ಪಡೆಗಳನ್ನು ಆಯ್ಕೆ ಮಾಡುವ ಅಥವಾ ಎಂಬಿಬಿಎಸ್ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ.
800 ಜನಸಂಖ್ಯೆಯನ್ನು ಹೊಂದಿರುವ ಅಕ್ರಿ ಗ್ರಾಮ ಪಂಚಾಯಿತಿಯು ಈ ನಿಟ್ಟಿನಲ್ಲಿ ನಿರ್ಣಯ ಅಂಗೀಕರಿಸಿದೆ. ಈ ಗ್ರಾಮವು ಪಟಿಯಾಲಾದ ಘನೌರ್ ಬ್ಲಾಕ್‌ನಲ್ಲಿದೆ.
562 ಮತದಾರರನ್ನು ಹೊಂದಿರುವ ಈ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಪಂಚಾಯತಿ ಸದಸ್ಯರು ಭಾನುವಾರ ಪ್ರಥಮ ಬಾರಿಗೆ ಸಭೆ ನಡೆಸಿ ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಪಂಚಾಯತ್‌ನ ಸರಪಂಚ್ ಮತ್ತು ಸದಸ್ಯರೆಲ್ಲರೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಮೊದಲ ಬಾರಿಗೆ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ, ವೃತ್ತಿಯಲ್ಲಿ ಬಡಗಿಯಾಗಿರುವ ಅಕ್ರಿ ಗ್ರಾಮದ ಸರಪಂಚ 38 ವರ್ಷದ ಜಸ್ವಿಂದರ್ ಸಿಂಗ್ ಅವರು, ಐಎಎಸ್ ಆಕಾಂಕ್ಷಿಗಳು ಹಾಗೂ ಡಾಕ್ಟರ್, ಇಂಜಿನಿಯರ್ ಆಕಾಂಕ್ಷಿಗಳಿಗೆ ಆರ್ಥಿಕ ನೆರವು ನೀಡಲು ಡಿ.22ರಂದು ನಡೆದ ಪಂಚಾಯಿತಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು ಎಂದರು.
"ಅರ್ಹ ಯುವಕರಿಗೆ ಒಂದು ಬಾರಿ ಹಣ ಖರ್ಚು ಮಾಡುತ್ತೇವೆ ಅಷ್ಟೆ. ಇದರಿಂದಾಗಿ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸಿದ ನಂತರ ಅವರು ಗ್ರಾಮಸ್ಥರಿಗೆ ಸಹಾಯ ಮಾಡುವುದನ್ನು ಮುಂದುವರಿಸಬಹುದು ಮತ್ತು ಇತರ ಯುವಕರು ಅವರ ಸಾಧನೆಯಿಂದ ಸ್ಫೂರ್ತಿ ಪಡೆಯುತ್ತಾರೆ" ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಹಲವಾರು ವಿದ್ಯಾರ್ಥಿನಿಯರು ಹಣದ ಸಮಸ್ಯೆಯಿಂದಾಗಿ ತಯಾರಿಗಾಗಿ ಕೋಚಿಂಗ್ ಸಂಸ್ಥೆಗಳನ್ನು ಸಂಪರ್ಕಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಹೊಸದಾಗಿ ಚುನಾಯಿತವಾದ ಪಂಚಾಯತ್ ಅಂಗೀಕರಿಸಿದ ನಿರ್ಣಯವು ಅವರಿಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.