ನವದೆಹಲಿ: ಸಂಸತ್ತಿನಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಗೆ ಉತ್ತರ ಪ್ರದೇಶ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಜನವರಿ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬರೇಲಿ ಕೋರ್ಟ್ ಓವೈಸಿಗೆ ಸೂಚಿಸಿದೆ.
ಎಐಎಂಐಎಂ ಮುಖ್ಯಸ್ಥ ಓವೈಸಿ ವಿರುದ್ಧ ವಕೀಲ ವೀರೇಂದ್ರ ಗುಪ್ತಾ ಅವರು ಬರೇಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರದ ವೇಳೆ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಐದು ಬಾರಿ ಸಂಸದರಾಗಿರುವ ಅವರು ಸಾಂವಿಧಾನಿಕ ಮತ್ತು ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುಪ್ತಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವಕೀಲ ಗುಪ್ತಾ ಅವರು, ಜುಲೈ 12ರಂದು ಸಂಸದ/ಶಾಸಕ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ತಿರಸ್ಕರಿಸಲಾಯಿತು. ಇದಾದ ನಂತರ ಗುಪ್ತಾ ಅವರು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿ ಸಲ್ಲಿಸಿದರು. ಜಿಲ್ಲಾ ನ್ಯಾಯಾಧೀಶ ಸುಧೀರ್ ಅವರು ಅರ್ಜಿಯನ್ನು ಸ್ವೀಕರಿಸಿ, ಜನವರಿ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಓವೈಸಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ವೀರೇಂದ್ರ ಗುಪ್ತಾ, ಓವೈಸಿ ಅವರ ಘೋಷಣೆಯಿಂದ ನನಗೆ ನೋವಾಗಿದ್ದು ಅವರ ಘೋಷಣೆ ಸಂವಿಧಾನದ ವಿರುದ್ಧವಾಗಿದೆ ಎಂದು ಹೇಳಿದರು.
ಹೈದರಾಬಾದ್‌ನಿಂದ ಗೆದ್ದ ನಂತರ, ಅಸಾದುದ್ದೀನ್ ಓವೈಸಿ ಜೂನ್ 25ರಂದು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವೇದಿಕೆಯಿಂದಲೇ ಸಂಘರ್ಷ ಪೀಡಿತ ಪಶ್ಚಿಮ ಏಷ್ಯಾ ದೇಶವನ್ನು ಶ್ಲಾಘಿಸಿದರು. ಆದರೆ, ನಂತರ ಅಧ್ಯಕ್ಷರು ಈ ಹೇಳಿಕೆಯನ್ನು ತೆಗೆದುಹಾಕಲು ಆದೇಶಿಸಿದರು. ಸದನದಿಂದ ಹೊರಬಂದ ನಂತರ ಒವೈಸಿ ತಮ್ಮ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದರು. ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು.