ಹೈದರಾಬಾದ್: ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಎದುರಿಸುತ್ತಿರುವಾಗಲೇ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪುಷ್ಪ 2 ಚಿತ್ರದಲ್ಲಿನ ದೃಶ್ಯವೊಂದರಲ್ಲಿ ಪೊಲೀಸ್ ಪಡೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ತೆಲಂಗಾಣದ ಕಾಂಗ್ರೆಸ್‌ನ ಹಿರಿಯ ನಾಯಕ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್‌ನ ತೇನ್ಮಾರ್ ಮಲ್ಲಣ್ಣ ಮೇಡಿಪಲ್ಲಿ ದೂರು ನೀಡಿದ್ದು, ಅಲ್ಲು ಅರ್ಜುನ್ ಮಾತ್ರವಲ್ಲದೆ ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ನಿರ್ಮಾಪಕರ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಇದ್ದ ಈಜುಕೊಳದೊಳಗೆ ನಾಯಕ ಮೂತ್ರ ವಿಸರ್ಜನೆ ಮಾಡುವ ದೃಶ್ಯವನ್ನು ತೇನ್ಮಾರ್ ಮಲ್ಲಣ್ಣ ವಿಶೇಷವಾಗಿ ಟೀಕಿಸಿದ್ದಾರೆ. ಈ ದೃಶ್ಯವು ಅಗೌರವ ಮತ್ತು ಕಾನೂನು ಜಾರಿ ಅಧಿಕಾರಿಗಳ ಘನತೆಗೆ ಕುಂದು ತಂದಿದೆ ಎಂದು ದೂರಿದ್ದಾರೆ.
ಚಿತ್ರ ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.