ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಸಂಕಷ್ಟಪಡುತ್ತಿದ್ದರೆ, ಮೋದಿ ಸರ್ಕಾರ ಕುಂಭಕರ್ಣನಂತೆ ನಿದ್ರೆ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಟೀಕಿಸಿದ್ದಾರೆ.
ಇಲ್ಲಿನ ಗಿರಿನಗರದ ತರಕಾರಿ ಮಾರುಕಟ್ಟೆಗೆ ಇತ್ತೀಚಿಗೆ ಭೇಟಿ ನೀಡಿ, ಗೃಹಿಣಿಯೊಂದಿಗೆ ಸಂವಾದ ನಡೆಸಿದ್ದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಸಾಮಾನ್ಯ ಜನರ ಬಜೆಟ್ ಹೇಗೆ ಕ್ಷೀಣಿಸುತ್ತಿದೆ ಮತ್ತು ಹಣದುಬ್ಬರ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ ಎಂಬುದನ್ನು ತಿಳಿಯಲು ಮಾರಾಟಗಾರರೊಂದಿಗೆ ಮಾತನಾಡಿದ್ದಾಗಿ ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ದೈನಂದಿನ ಅಗತ್ಯಗಳ ಖರೀದಿಯಲ್ಲಿ ರಾಜಿ ಮಾಡಿಕೊಳ್ಳಬೇಕಾದ ಸಂದರ್ಭವಿದೆ ಎಂದು ಅವರು ಫೋಸ್ಟ್ ಮಾಡಿದ್ದಾರೆ.
ಬೆಳ್ಳುಳ್ಳಿ, ಬಟಾಣಿ, ಅಣಬೆ ಮತ್ತು ಇತರ ತರಕಾರಿಗಳ ಬೆಲೆಗಳ ಕುರಿತು ಚರ್ಚಿಸಿದ್ದು, ಜನರ ನೈಜ ಅನುಭವಗಳನ್ನು ಕೇಳಿದ್ದೇವೆ. ಒಂದು ಕಾಲದಲ್ಲಿ 40 ರೂ. ಇದ್ದ ಬೆಳ್ಳುಳ್ಳಿ ಈಗ ಕೆಜಿಗೆ 400 ರೂ. ಮತ್ತು ಬಟಾಣಿ 120 ರೂ.ಗೆ ಏರಿಕೆಯಾಗಿದೆ. ಜನರು ಏನು ತಿನ್ನುತ್ತಾರೆ ಮತ್ತುಹೇಗೆ ಉಳಿಸುತ್ತಾರೆ ಎಂದು ಅವರು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಚಹಾ ಕುರಿತು ಮಾತನಾಡುವಾಗ ಗೃಹಣಿಯರ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ಅರ್ಥ ಮಾಡಿಕೊಂಡಿದ್ದೇವೆ. ಆಹಾರದ ಬೆಲೆ ಹೆಚ್ಚಳದಿಂದ ಆಟೋ ರಿಕ್ಷಾ ದರ ರೂ.10ನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಹೇಗೆ ಹಣ ಉಳಿಸಲು ಸಾಧ್ಯ ಎಂದು ಅವರು ಹೇಳಿರುವುದಾಗಿ ತಿಳಿಸಿದರು. ಐದು ನಿಮಿಷಗಳ ವಿಡಿಯೋದಲ್ಲಿ ತರಕಾರಿ ಖರೀದಿಸುತ್ತಿರುವ ಕೆಲವು ಮಹಿಳೆಯರೊಂದಿಗೆ ರಾಹುಲ್ ಗಾಂಧಿ ಇದ್ದಾರೆ.
ಮೋದಿ ಸರ್ಕಾರ ಘೋಷಿಸಿದ್ದ ಬುಲೆಟ್ ರೈಲು ಇನ್ನೂ ಬಂದಿಲ್ಲ. ಆದರೆ, ಹಣದುಬ್ಬರ ಬುಲೆಟ್ ರೈಲಿಗಿಂತ ವೇಗವಾಗಿ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.