ನವದೆಹಲಿ: ಸಂಸತ್ತಿನ ಬಳಿ ಡಿ. 25ರಂದು ಬೆಂಕಿ ಹಚ್ಚಿಕೊಂಡಿದ್ದ 26 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಶುಕ್ರವಾರ ಇಲ್ಲಿನ ಡಾ. ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂಬುವವರು ಬುಧವಾರ ಹೊಸ ಸಂಸತ್ ಕಟ್ಟಡದ ಬಳಿ ಪೆಟ್ರೋಲ್‌ನಂತಹ ದ್ರವವನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅವರು, ಆತ್ಮಹತ್ಯೆಗೆ ಯತ್ನಿಸಿದ್ದರು.
ಸಂಸತ್ತಿನ ಬಳಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ನಂತರ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪ್ರಾಥಮಿಕ ತನಿಖೆಗಳ ಪ್ರಕಾರ, ಬಾಗ್‌ಪತ್‌ನಲ್ಲಿನ ಕೆಲವು ಜನರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಅವರ ಕುಟುಂಬವು ಮತ್ತೊಂದು ಕುಟುಂಬದ ಮೇಲಿನ ಎರಡು ಹಲ್ಲೆ ಪ್ರಕರಣಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಆತ ಅಸಮಾಧಾನಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಶೇ 95 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆತ ಶುಕ್ರವಾರ ಮುಂಜಾನೆ 2.23ಕ್ಕೆ ಕೊನೆಯುಸಿರೆಳೆದಿದ್ದಾನೆ.
ಮರಣೋತ್ತರ ಪರೀಕ್ಷೆಯ ನಂತರ ಜಿತೇಂದ್ರ ಅವರ ಮೃತ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.