ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಬದುಕಿದ್ದಾಗ ಅವರನ್ನು ಗೌರವಿಸದ ಕಾಂಗ್ರೆಸ್, ಅವರ ನಿಧನದ ನಂತರ ಅವರ ಗೌರವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಸುಗ್ರೀವಾಜ್ಞೆ ಹರಿದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದ್ದ ರಾಹುಲ್ ಗಾಂಧಿ ಇಂದು ಅವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮರಣಾರ್ಥ ದೆಹಲಿಯಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಂಪುಟದ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್‌ನ ಉನ್ನತ ನಾಯಕತ್ವಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಅವರು ವಿನಃಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಮನಮೋಹನ್ ಸಿಂಗ್ ಅಂತ್ಯಸಂಸ್ಕಾರದ ಬಳಿಕ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ನಿಗಮ್ ಬೋಧ್ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಸುವ ಮೂಲಕ ಸರ್ಕಾರ ಮಾಜಿ ಪ್ರಧಾನಿಗೆ ಅಗೌರವ ತೋರಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಅದನ್ನು ಸಿಖ್ ಧರ್ಮಕ್ಕೂ ಜೋಡಿಸಿ ಮೊದಲ ಸಿಖ್ ಪ್ರಧಾನಿಗೆ ಮಾಡಿದ ಅವಮಾನ ಎಂದು ಹೇಳಿದರು. ಆ ಬಳಿಕ ಬಿಜೆಪಿ ಇತಿಹಾಸದ ಹಲವು ಪುಟಗಳನ್ನು ಒಂದೊಂದಾಗಿ ತಿರುವಿ ಹಾಕಿದ್ದು, ಮನಮೋಹನ್ ಸಿಂಗ್ ಬದುಕಿದ್ದಾಗಲೂ ಕಾಂಗ್ರೆಸ್ ಕುಟುಂಬ ಗೌರವ ನೀಡಿಲ್ಲ ಎಂದು ಆರೋಪಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು, ''ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ನಂತರವೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಮಾಡುವುದನ್ನು ಬಿಡದಿರುವುದು ನಿಜಕ್ಕೂ ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ. ಗಾಂಧಿ ಕುಟುಂಬವು ದೇಶದ ಯಾವುದೇ ದೊಡ್ಡ ನಾಯಕನನ್ನು ಗೌರವಿಸಲಿಲ್ಲ ಅಥವಾ ನ್ಯಾಯ ಕೊಡಲಿಲ್ಲ. ಅದು ಕಾಂಗ್ರೆಸ್ ಪಕ್ಷದವರಿಗಾಗಲಿ ಅಥವಾ ವಿರೋಧ ಪಕ್ಷದವರಾಗಲಿ, ಅದು ಬಾಬಾ ಸಾಹೇಬ್ ಅಂಬೇಡ್ಕರ್ ಆಗಿರಲಿ, ಅದು ರಾಜೇಂದ್ರ ಬಾಬು ಆಗಿರಲಿ, ಸರ್ದಾರ್ ಪಟೇಲ್ ಆಗಿರಲಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿವಿ ನರಸಿಂಹರಾವ್, ಪ್ರಣಬ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಯಾರನ್ನು ಗೌರವಿಸಿಲ್ಲ. ಇದೀಗ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಕೇಂದ್ರ ಸರ್ಕಾರ ಜಾಗ ನೀಡಿದೆ. ಆದರೂ ಈಗಲೂ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆರೋಪಿಸಿದರು.
ರಾಹುಲ್‌ಗೆ ತಿರುಗೇಟು ನೀಡಿದ ಬಿಜೆಪಿ ವಕ್ತಾರ ಮತ್ತು ಲೋಕಸಭೆಯ ಸಂಸದ ಸಂಬಿತ್ ಪಾತ್ರ, ಮಾಜಿ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ನಿಧನರಾದಾಗ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಂತೆ ಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದು ನೆನಪಿಸಿದರು. ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ನಿಧನರಾದಾಗಲೂ ನೆಹರೂ ಅವರ ಅಂತ್ಯಕ್ರಿಯೆಗೆ ಗೈರು ಹಾಜರಾಗಿದ್ದರು. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ರಾಹುಲ್ ರಾಜಕೀಯದಿಂದ ಹಿಂದೆ ಸರಿಯದಿರುವುದು ಬೇಸರದ ಸಂಗತಿ ಎಂದು ಸಂಬಿತ್ ಹೇಳಿದ್ದಾರೆ.