ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸರಪಂಚ ಹತ್ಯೆ ಪ್ರಕರಣದ ಆರೋಪಿ ವಾಲ್ಮೀಕ್ ಕರದ್ ಕೊನೆಗೂ ಪೊಲೀಸರ ಮುಂದೆ ಶರಣಾಗಿದ್ದಾನೆ. ಬೀಡ್ ಜಿಲ್ಲೆಯ ಸರಪಂಚ್ ಹತ್ಯೆಗೆ ಸಂಬಂಧಿಸಿದಂತೆ ಸುಲಿಗೆ ಪ್ರಕರಣದಲ್ಲಿ ಬೇಕಾಗಿದ್ದ ಮಹಾರಾಷ್ಟ್ರದ ಸಚಿವ ಧನಂಜಯ್ ಮುಂಡೆ ಅವರ ಆಪ್ತ ಸಹಾಯಕ ವಾಲ್ಮೀಕ್ ಕರದ್ ಇಂದು ಪುಣೆಯಲ್ಲಿ ಕರದ್ ಪೊಲೀಸರ ಮುಂದೆ ಶರಣಾಗಿದ್ದಾನೆ.
ಶರಣಾಗುವ ಮುನ್ನ ವಾಲ್ಮೀಕ ಕರಾಡ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದಲ್ಲಿ ತನ್ನನ್ನು ಎಳೆದು ತರಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಅಪ್‌ಲೋಡ್ ಮಾಡಿದ ಬಳಿಕವೇ ಕರದ್ ಪೊಲೀಸರ ಮೊರೆ ಹೋಗಿ ಶರಣಾಗಿದ್ದಾನೆ.
ಪೊಲೀಸರ ಪ್ರಕಾರ, ಮಸ್ಜೋಗ್ ಗ್ರಾಮದ ಸರಪಂಚ್ ಸಂತೋಷ್ ದೇಶಮುಖ್ ಅವರನ್ನು ಡಿಸೆಂಬರ್ 9ರಂದು ಅಪಹರಿಸಿ ನಂತರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೀಡ್ ಜಿಲ್ಲೆಯ ವಿಂಡ್ ಮಿಲ್ ಕಂಪನಿಯೊಂದಕ್ಕೆ ಕೆಲವರು ಹಣಕ್ಕಾಗಿ ಒತ್ತಾಯಿಸಿ ಸುಲಿಗೆ ಯತ್ನಿಸಿದ್ದನ್ನು ಸಂತೋಷ್ ದೇಶಮುಖ್ ವಿರೋಧಿಸಿದ್ದರು.
ಈ ಹಿಂದೆ ಸರಪಂಚ ಹತ್ಯೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಸುಲಿಗೆ ಪ್ರಕರಣದಲ್ಲಿ ವಾಲ್ಮೀಕ್ ಕರದ್ ನನ್ನು ವಾಂಟೆಡ್ ಆರೋಪಿ ಎಂದು ಹೆಸರಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕರದ್ ತನ್ನ ಸಹಚರರೊಂದಿಗೆ ಕಾರಿನಲ್ಲಿ ಪುಣೆಯಲ್ಲಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಚೇರಿಯ ಹೊರಗೆ ಬಂದು ಶರಣಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.