ದೇಶ

‘ಇಂಡಿಯಾ’ ಮೈತ್ರಿಕೂಟ ಲೋಕಸಭೆ ಚುನಾವಣೆಗೆ ಮಾತ್ರ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಗೆ ಅಲ್ಲ: ಕಾಂಗ್ರೆಸ್

Lingaraj Badiger

ರಾಮಪುರ: ‘ಇಂಡಿಯಾ’ ಮೈತ್ರಿಕೂಟ 2024ರ ಲೋಕಸಭೆ ಚುನಾವಣೆಗೆ ಹೊರತು ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಗೆ ಅಲ್ಲ ಎಂದು  ಕಾಂಗ್ರೆಸ್ ಶುಕ್ರವಾರ ಸ್ಪಷ್ಟಪಡಿಸಿದೆ. ಅಲ್ಲದೆ ಲೋಕಸಭೆ ಚುನಾವಣೆಗೆ 27 ವಿರೋಧ ಪಕ್ಷಗಳ ಮೈತ್ರಿಕೂಟ ಅಸ್ತಿತ್ವದಲ್ಲಿದೆ ಮತ್ತು ಒಟ್ಟಾಗಿ ಹೋರಾಡಲಿದೆ ಎಂದು ಪ್ರತಿಪಾದಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಇತ್ತೀಚೆಗೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರ್ಪಡೆಯಾಗಿದ್ದು, ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷಗಳ ಸಂಖ್ಯೆ 27ಕ್ಕೆ ಇಳಿದಿದೆ.

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದು ರಾಜಕೀಯ ಕಾರ್ಯಕ್ರಮವಾಗಿದ್ದರೂ ಚುನಾವಣಾ ಪ್ರಚಾರವಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.

"ಇಂಡಿಯಾ ಮೈತ್ರಿಯು ಸಾರ್ವತ್ರಿಕ ಚುನಾವಣೆಗಾಗಿಯೇ ಹೊರತು ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಅಥವಾ ಇತರ ಯಾವುದೇ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗಾಗಿ ಅಲ್ಲ" ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ಒಟ್ಟಾಗಿ ಎದುರಿಸಲಿದ್ದರೂ, ಇತರ ರಾಜ್ಯಗಳ ಚುನಾವಣೆಯಲ್ಲಿ ಇಂಡಿಯಾ ಪಾಲುದಾರರ ಮೈತ್ರಿ ಇರುವುದಿಲ್ಲ ಎಂದು ರಮೇಶ್ ಹೇಳಿದ್ದಾರೆ.

ದೇಶದಲ್ಲಿ ಬಿಜೆಪಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸದ ಏಕೈಕ ಪಕ್ಷ ಕಾಂಗ್ರೆಸ್ ಎಂದು ರಮೇಶ್ ತಿಳಿಸಿದ್ದಾರೆ.

SCROLL FOR NEXT