ದೇಶ

ಬಿಜೆಪಿಯಿಂದ ಎಎಪಿ ಶಾಸಕರ ಖರೀದಿ ಆರೋಪ: ಸಿಎಂ ಕೇಜ್ರಿವಾಲ್‌ ನಿವಾಸಕ್ಕೆ ಕ್ರೈಂ ಬ್ರಾಂಚ್ ಪೊಲೀಸರ ಭೇಟಿ!

Manjula VN

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಖರೀದಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ದೆಹಲಿ ಪೊಲೀಸ್ ಅಪರಾಧ ದಳ ಶನಿವಾರ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.

ಉತ್ತರ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಮುಖ್ಯಂತ್ರಿಯವರ ಅಧಿಕೃತ ನಿವಾಸಕ್ಕೆ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ದರ್ಜೆಯ ಅಧಿಕಾರಿಯ ನೇತೃತ್ವದ ತಂಡವು ತೆರಳಿದೆ ಎಂದು ತಿಳಿದುಬಂದಿದೆ.

ದೆಹಲಿ ಪೊಲೀಸ್ ಅಪರಾಧ ದಳ, ಶುಕ್ರವಾರ ಸಂಜೆಯೂ ಕೇಜ್ರಿವಾಲ್ ನಿವಾಸಕ್ಕೆ ಭೇಟಿ ಕೊಟ್ಟಿತ್ತು. ಆದರೆ ಕೇಜ್ರಿವಾಲ್ ನಿವಾಸದ ಅಧಿಕಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ನೋಟಿಸ್ ನೀಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ದೆಹಲಿ ಸಚಿವೆ ಆತಿಶಿ ನಿವಾಸಕ್ಕೂ ಕ್ರೈ ಬ್ರಾಂಚ್ ತಂಡ ಭೇಟಿ ಕೊಟ್ಟಿತ್ತು. ಅವರು ಉಪಸ್ಥಿತರರಿಲ್ಲ ಎಂದು ವರದಿಗಳು ತಿಳಿಸಿವೆ.

ಈ ಹಿಂದೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕೇಜ್ರಿವಾಲ್ ಅವರು, ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನ ನಡೆಸುತ್ತಿದ್ದು, ನಮ್ಮ ಪಕ್ಷದ 7 ಮಂದಿ ಶಾಸಕರಿಗೆ 25 ಕೋಟಿ ರೂ. ಆಮಿಷ ಒಡ್ಡಿದೆ ಎಂದು ಆರೋಪಿಸಿದ್ದರು.

ಇತ್ತೀಚೆಗೆ ನಮ್ಮ ದೆಹಲಿಯ ಏಳು ಶಾಸಕರನ್ನು ಬಿಜೆಪಿಗರು ಸಂಪರ್ಕಿಸಿ, ಕೆಲವು ದಿನಗಳ ಬಳಿಕ ನಾವು ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ನಂತರ ನಿಮ್ಮ ಶಾಸಕರನ್ನು ಒಡೆಯುತ್ತೇವೆ. 21 ಶಾಸಕರೊಂದಿಗೆ ಮಾತುಕತೆಯೂ ಸಹ ನಡೆಸಲಾಗಿದೆ. ಇತರರೊಂದಿಗೂ ಮಾತನಾಡುತ್ತೇವೆ. ಆದಾದ ಮೇಲೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವೂ ಕೂಡ ಬರಬಹುದು. 25 ಕೋಟಿ ರೂ. ನೀಡುತ್ತೇವೆ, ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದ್ದಾರೆ. ನಾವು 21 ಶಾಸಕರನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ,  ನಮ್ಮ ಮಾಹಿತಿಯ ಪ್ರಕಾರ ಕೇವಲ 7 ಶಾಸಕರನ್ನು ಮಾತ್ರ ಸಂಪರ್ಕಿಸಲಾಗಿದ್ದು, ಅವರೆಲ್ಲರೂ ನಿರಾಕರಿಸಿದ್ದಾರೆಂದು ಹೇಳಿದ್ದರು.

ಏತನ್ಮಧ್ಯೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಐದನೇ ಬಾರಿಯೂ ಗೈರಾಗಿದ್ದಾರೆ.

SCROLL FOR NEXT