ದೇಶ

ಭಾರತದ ರಾಯಭಾರ ಕಚೇರಿಯಲ್ಲಿದ್ದುಕೊಂಡೇ ಪಾಕ್ ಪರ ಗೂಢಚಾರಿಕೆ: ಉತ್ತರ ಪ್ರದೇಶ STF ನಿಂದ ವ್ಯಕ್ತಿ ಬಂಧನ

Srinivasamurthy VN

ನವದೆಹಲಿ: ಭಾರತದ ರಾಯಭಾರ ಕಚೇರಿಯಲ್ಲಿದ್ದುಕೊಂಡೇ ಪಾಕ್ ಪರ ಗೂಢಚಾರಿಕೆ ಮಾಡಿದ ಆರೋಪದ ಮೇರೆಗೆ ಉತ್ತರ ಪ್ರದೇಶ STF ಅಧಿಕಾರಿಗಳು ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಹೌದು.. ರಷ್ಯಾದ ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI Agent) ಏಜೆಂಟ್​ನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಸ್​ಟಿಎಫ್​ ) ಬಂಧಿಸಿದ್ದು, ಈತ ಭಾರತೀಯನಾಗಿದ್ದರೂ ಪಾಕ್ ಬೇಹುಗಾರಿಕ ಸಂಸ್ಥೆಗೆ ನಮ್ಮ ಗೌಪ್ಯ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಂಧಿತ ಏಜೆಂಟ್ ನನ್ನು ಸತ್ಯೇಂದ್ರ ಸಿವಾಲ್ ಎಂದು ಗುರುತಿಸಲಾಗಿದ್ದು,  ಈತ 2021ರಿಂದ ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿಯಲ್ಲಿ ನೇಮಿಸಲಾಗಿತ್ತು. ಅಲ್ಲಿ ಭಾರತ ಮೂಲದ ಭದ್ರತಾ ಸಹಾಯಕರಾಗಿ (ಐಬಿಎಸ್ಎ) ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಅಧಿಕೃತ ಹೇಳಿಕೆಯ ಪ್ರಕಾರ, ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತ್ಯೇಂದ್ರನ ಬಗ್ಗೆ ತನ್ನ ಮೂಲಗಳಿಂದ ಸುಳಿವು ಪಡೆದಿತ್ತು. ಇದೀಗ ಮೀರತ್​ನಲ್ಲಿ ಆತನನ್ನು ಬಂಧಿಸಿದೆ. ಉತ್ತರ ಪ್ರದೇಶದ ಎಟಿಎಸ್ ಸಿವಾಲ್ ನನ್ನು ವಿಚಾರಣೆ ನಡೆಸಿದ್ದು, ಆರಂಭದಲ್ಲಿ ಅತೃಪ್ತಿಕರ ಉತ್ತರಗಳನ್ನು ನೀಡಿದ್ದ ಆತನನ್ನು ತೀವ್ರ ವಿಚಾರಗೊಳಪಡಿಸಿದ ಬಳಿಕ ಬೇಹುಗಾರಿಕೆಯನ್ನು ಒಪ್ಪಿಕೊಂಡಿದ್ದಾನೆ. ಆತ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದ ಎಂದು ಉತ್ತರ ಪ್ರದೇಶದ ಎಸ್​ಟಿಎಫ್​ ​ ತಿಳಿಸಿದೆ.

ರಾಫೆಲ್​ ವಿಮಾನದ ಚಿತ್ರ ಕಳುಹಿಸಿದ್ದ
ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ದೇಶದಲ್ಲಿ ಸಾಮರಸ್ಯ ಭಂಗಗೊಳಿಸುವ ಸಲುವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ ಎಂದು ಹೇಳಿಕೆ ತಿಳಿಸಿದ್ದು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತಾ ಸ್ಥಿತಿಯ ಕುರಿತ ಚಿತ್ರಗಳನ್ನು ತೆಗೆದುಕೊಂಡು ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನದ ಐಎಸ್ಐನೊಂದಿಗೆ ಹಂಚಿಕೊಳ್ಳುವ ಪ್ರಮಾದವನ್ನೇ ಮಾಡಿದ್ದಾನೆ. ಆರೋಪಿ ವಾಟ್ಸ್​ಆ್ಯಪ್ ಮೂಲಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕೇಳಿದ ಮಾಹಿತಿಯನ್ನು ಸಂಗ್ರಹಿಸಿ ರವಾನಿಸುತ್ತಿದ್ದ. ಭಾರತದಲ್ಲಿ ಭದ್ರತೆಗೆ ಸಂಬಂಧಿಸಿದ ಸ್ಥಳಗಳ ಛಾಯಾಚಿತ್ರಗಳು ಮತ್ತು ವಾಟ್ಸಾಪ್ ಸಂದೇಶಗಳನ್ನು ಐಎಸ್ಐ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ ಎಂದು ಉತ್ತರ ಪ್ರದೇಶದ ಎಟಿಎಸ್​ ತಿಳಿಸಿದೆ. ಸಿವಾಲ್​ ರಫೇಲ್ ಯುದ್ಧ ವಿಮಾನಗಳ ಚಿತ್ರಗಳನ್ನು ತೆಗೆದು ಪಾಕಿಸ್ತಾನ ಏಜೆನ್ಸಿಯೊಂದಿಗೆ ಹಂಚಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.

ಭಾರತೀಯ ಸೇನೆ ಮತ್ತು ಅದರ ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಐಎಸ್​ಐ ಹಣದ ಆಮಿಷ ಒಡ್ಡುತ್ತಿತ್ತು ಎಂದು ಸತ್ಯೇಂದ್ರ ಎಂದು ಬಹಿರಂಗಪಡಿಸಿದ್ದಾನೆ. 
 

SCROLL FOR NEXT