ದೇಶ

ಉತ್ತಮ ಅಭ್ಯರ್ಥಿಗಳೊಂದಿಗೆ ಹೆಚ್ಚು ಪ್ರಯತ್ನ ಪಟ್ಟಿದ್ದರೆ ಕಾಂಗ್ರೆಸ್ ರಾಜಸ್ಥಾನ ಚುನಾವಣೆ ಗೆಲ್ಲಬಹುದಿತ್ತು: ಸಚಿನ್ ಪೈಲಟ್

Lingaraj Badiger

ನವದೆಹಲಿ: ಉತ್ತಮ ಅಭ್ಯರ್ಥಿಗಳೊಂದಿಗೆ ಇನ್ನೂ ಸ್ವಲ್ಪ ಹೆಚ್ಚು ಪ್ರಯತ್ನ ಪಟ್ಟಿದ್ದರೆ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಬಹುದಿತ್ತು ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ ಹೇಳಿದ್ದಾರೆ. ಅಲ್ಲದೆ ತಮ್ಮ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ.

ಇಂದು ನಡೆದ ಲೋಕಮಾತ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಸಚಿನ್ ಪೈಲಟ್, ರಾಜಸ್ಥಾನದಲ್ಲಿ ಕಾಂಗ್ರೆಸ್ ಉತ್ತಮ ಹೋರಾಟ ಮಾಡಿದೆ. ಆದರೆ, ತಾವು ಗೆಲ್ಲಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

"ರಾಜಸ್ಥಾನದಲ್ಲಿ ನಮಗೆ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸಿದ್ದೆ. ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೂ ಇನ್ನೂ ಸ್ವಲ್ಪ ಹೆಚ್ಚು ಪ್ರಯತ್ನ ಮಾಡಿದ್ದರೆ, 25 ಹಾಲಿ ಸಚಿವರಲ್ಲಿ 17-18 ಮಂದಿ ಚುನಾವಣೆಯಲ್ಲಿ ಸೋತರು. ನಾವು ವಿಭಿನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರೆ ಗೆಲ್ಲಬಹುದಿತ್ತು" ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಪೈಲಟ್, ಗೆಹ್ಲೋಟ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ತಮ್ಮ ನಡುವಿನ ಭಿನ್ನಾಭಿಪ್ರಾಯ ಚುನಾವಣೆ ಮೇಲೆ ಯಾವುದೇ ಪರಿಣಾನ ಬೀರಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಶೋಕ್ ಗೆಹ್ಲೋಟ್ ಅವರನ್ನು ಬದಲಾಯಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಚುನಾವಣೆಗೆ ಇನ್ನೂ ಐದು ವರ್ಷ ಬಾಕಿ ಇದೆ ಎಂದರು.

SCROLL FOR NEXT