ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರು ಗುರುವಾರ ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ (ಹಿಂದೆ ಟ್ವಿಟರ್ ಖಾತೆ) ನಲ್ಲಿ ಪೋಸ್ಟ್ ಮಾಡಿರುವ ಸಿದ್ದಿಕ್ ಅವರು, "ನಾನು ಹದಿಹರೆಯದವನಾಗಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಮತ್ತು ಇದು 48 ವರ್ಷಗಳ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಇಷ್ಟಪಡುವ ಬಹಳಷ್ಟು ಸಂಗತಿಗಳಿವೆ. ಆದರೆ ಕೆಲವು ವಿಷಯಗಳನ್ನು ಹೇಳದೆ ಬಿಡುವುದು ಉತ್ತಮ. ಈ ಸುದೀರ್ಘ ಪ್ರಯಾಣದಲ್ಲಿ ನನ್ನೊಂದಿಗೆ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.
ಬಾಬಾ ಸಿದ್ದಿಕ್ ಅವರ ಮಗ ಪ್ರಸ್ತುತ ಮುಂಬೈನ ಬಾಂದ್ರಾ(ಪೂರ್ವ) ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಬಾಬಾ ಸಿದ್ದಿಕ್ ಅವರು 1999, 2004 ಮತ್ತು 2009 ರಲ್ಲಿ ಸತತ ಮೂರು ಅವಧಿಗೆ ಶಾಸಕರಾಗಿದ್ದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಮತ್ತು ಎಫ್‌ಡಿಎ(2004-08) ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಜಿತ್ ಪವಾರ್ ನೇತೃತ್ವದ-ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಅವರು ತಿಳಿಸಿದ್ದಾರೆ.