ದೇಶ

ಚೆನ್ನೈ: ಮಾಜಿ ಮೇಯರ್ ಪುತ್ರನ ಮೃತದೇಹ ಅಪಘಾತವಾದ 8 ದಿನಗಳ ನಂತರ ಹಿಮಾಚಲದಲ್ಲಿ ಪತ್ತೆ!

Nagaraja AB

ಚೆನ್ನೈ: ಚೆನ್ನೈನ ಮಾಜಿ ಮೇಯರ್ ಪುತ್ರನ ಮೃತದೇಹ ಅಪಘಾತ ಸಂಭವಿಸಿದ 8 ದಿನಗಳ ನಂತರ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತೆರಳುತ್ತಿದ್ದ ವಾಹನ ಸಟ್ಲೇಜ್ ನದಿಯ 200 ಮೀಟರ್ ಕೆಳಗೆ ಮುಳುಗಿದ ನಂತರ ನಾಪತ್ತೆಯಾಗಿದ್ದ ಅವರ ಮೃತದೇಹವನ್ನು ಎಂಟು ದಿನಗಳ ನಂತರ ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಫೆಬ್ರವರಿ 4 ರಂದು ಕಶಾಂಗ್ ನಲ್ಲಾ ಬಳಿ ಅಪಘಾತ ಸಂಭವಿಸಿದೆ. ಚೆನ್ನೈನ ಮಾಜಿ ಮೇಯರ್ ಸೈದೈ ದುರೈಸಾಮಿ ಅವರ ಪುತ್ರ ವೆಟ್ರಿ ದುರೈಸಾಮಿ (45) ಅವರ ಮೃತದೇಹವು ಅಪಘಾತವಾದ ಸ್ಥಳದಿಂದ ಸುಮಾರು 3 ಕಿಮೀ ದೂರದಲ್ಲಿರುವ ಸಟ್ಲುಜ್ ನದಿಯಿಂದ ವಶಕ್ಕೆ ಪಡೆಯಲಾಗಿದೆ. ಮಹುನ್ ನಾಗ್ ಅಸೋಸಿಯೇಷನ್, ಸುಂದರ್‌ನಗರ (ಮಂಡಿ) ಮುಳುಗು ತಜ್ಞರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಕಿನ್ನೌರ್ ಉಪ ಆಯುಕ್ತ ಅಮಿತ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಶಿಮ್ಲಾದ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಎರಡು ದಿನಗಳ ನಂತರ ವೆಟ್ರಿ ಅವರ ತಂದೆ ಸೈದೈ ದುರೈಸಾಮಿ ಅವರು ತಮ್ಮ ಮಗನನ್ನು ಹುಡುಕಿಕೊಟ್ಟವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ತನ್ನ ಮಗನನ್ನು ಹುಡುಕಲು ಸಹಾಯ ಮಾಡುವಂತೆ ಸ್ಥಳೀಯ ಜನರಿಗೆ ಮನವಿಯನ್ನೂ ಮಾಡಿದ್ದರು. ವಾಹನವು ಕಾಜಾದಿಂದ ಶಿಮ್ಲಾಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

SCROLL FOR NEXT