ದೇಶ

ರೈತರ ಪ್ರತಿಭಟನೆ ಎಫೆಕ್ಟ್: ಪಂಜಾಬ್ ಗೆ ಡೀಸೆಲ್, ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ!

Srinivasamurthy VN

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (minimum support price-MSP) ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತಪರ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿರುವಂತೆಯೇ ಇತ್ತ ಪಂಜಾಬ್ ಗೆ ಸರಬರಾಜಾಗುತ್ತಿದ್ದ ಡೀಸೆಲ್ ಮತ್ತು ಗ್ಯಾಸ್ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಹಿನ್ನಲೆಯಲ್ಲಿ ಪಂಜಾಬ್ ಗೆ ರವಾನೆಯಾಗಬೇಕಿದ್ದ ಡೀಸೆಲ್ ಮತ್ತು ಗ್ಯಾಸ್ ಸರಬರಾಜಿನಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ. ಸುದ್ದಿಯಲ್ಲಿರುವಂತೆ ಪಂಜಾಬ್ ಗೆ ಸರಬರಾಜಾಗುವ ಡೀಸೆಲ್ ಪ್ರಮಾಣದಲ್ಲಿ ಶೇ.50ರಷ್ಟು ಮತ್ತು ಗ್ಯಾಸ್ ಸರಬರಾಜಿನಲ್ಲಿ ಶೇ.20ರಷ್ಟು ಇಳಿಕೆಯಾಗಿದೆ ಎಂದು ಹೇಳಲಾಗಿದೆ. 

ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಗಡಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದು, ಡೀಸೆಲ್ ಮತ್ತು ಗ್ಯಾಸ್ ಸರಬರಾಜಿನ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ವಿವಿಧ ರಾಜ್ಯಗಳ ಪ್ರತಿಭಟನಾನಿರತ ರೈತರು ಪಂಜಾಬ್‌ನಿಂದ ದೆಹಲಿಗೆ ಮೆರವಣಿಗೆಯನ್ನು ಪ್ರಾರಂಭಿಸಿದ್ದು, ಈಗಾಗಲೇ ದೆಹಲಿ ಸಂಪರ್ಕಿಸುವ ಎಲ್ಲ ಗಡಿಗಳಲ್ಲಿ ವ್ಯಾಪಕ ಭದ್ರತೆ ನಿಯೋಜಿಸಲಾಗಿದೆ. MSP, ಖರೀದಿ ಬೆಲೆಗಳು ಸೇರಿದಂತೆ ರೈತರು ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಅಲ್ಲದೆ ಬೇಡಿಕೆ ಈಡೇರದ ಹೊರತು ತಾವು ದೆಹಲಿಯಿಂದ ಕಾಲ್ತೆಗೆಯುವುದಿಲ್ಲ ಎಂದು ಶಪಥ ಮಾಡಿದ್ದು, ಇದೇ ಕಾರಣಕ್ಕೆ ಸಕಲ ಸಿದ್ಧತೆಗಳೊಂದಿಗೆ ದೆಹಲಿಗೆ ಬಂದಿದ್ದೇವೆ ಎಂದು ಘೋಷಿಸಿದ್ದಾರೆ. ಈ ಬಾರಿಯ ಪ್ರತಿಭಟನೆಗೆ ರೈತ ಸಂಘದ ಮುಖಂಡರಾದ ಜಗಜೀತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಕರೆ ನೀಡಿದೆ. 
 

SCROLL FOR NEXT