ನವದೆಹಲಿ: ಚುನಾವಣಾ ಬಾಂಡ್ ನಿಷೇಧಿಸಿರುವ ಸುಪ್ರೀಂ ಕೋರ್ಟ್ ತಿರ್ಪನ್ನು ವಿಪಕ್ಷಗಳು ಸ್ವಾಗತಿಸಿದ್ದರೆ, ಬಿಜೆಪಿ ಕೊನೆಗೂ ಪ್ರತಿಕ್ರಿಯೆ ನೀಡಿದೆ.
ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ನಿಷೇಧಿಸಿ ನೀಡಿರುವ ತೀರ್ಪನ್ನು ವಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂದು ಆರೋಪಿಸಿದೆ. ಸುಪ್ರೀಂ ಕೋರ್ಟ್ ನ ಪ್ರತಿಯೊಂದು ತೀರ್ಪನ್ನೂ ಗೌರವಿಸಬೇಕು ಎಂದು ಬಿಜೆಪಿ ಹೇಳಿದೆ.
ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ, ವಿಪಕ್ಷಗಳ ಬಳಿ ಪ್ರಧಾನಿ ಮೋದಿಗೆ ಪರ್ಯಾಯವಾದ ನಾಯಕತ್ವ ಇಲ್ಲ ಆದ್ದರಿಂದ ಈ ವಿಷಯವನ್ನೂ ವಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸರ್ಕಾರ ಚುನಾವಣೆಯಲ್ಲಿ ಕಪ್ಪು ಹಣದ ಹರಿವನ್ನು ನಿಗ್ರಹಿಸುವುದಕ್ಕಾಗಿ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತಂದಿತ್ತು.
ಇದು ಹಲವು ದಶಕಗಳ ಪಯಣವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಕಪ್ಪು ಹಣ ನುಸುಳುವುದನ್ನು ತಡೆಯುವುದು ಹೇಗೆ ಎಂಬ ಕಾಳಜಿಯ ಚಿಂತನೆಯಾಗಿತ್ತು ಎಂದು ಬಿಜೆಪಿ ನಾಯಕ ಹೇಳಿದ್ದಾರೆ. "ಕೊಡುಗೆದಾರರ ಗುರುತಿನ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು, ಒಂದು (ಚುನಾವಣಾ ಬಾಂಡ್) ಯೋಜನೆ ಬಂದಿತ್ತು. ಈ ಸ್ವರೂಪದಲ್ಲಿ ಈ ಯೋಜನೆ ಇರಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ, ಕೆಲವು ನಿರ್ದೇಶನಗಳನ್ನು ನೀಡಿದೆ" ಎಂದು ನಳಿನ್ ಕೊಹ್ಲಿ ಹೇಳಿದ್ದಾರೆ.