ಕೋಲ್ಕತಾ: ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಪಕ್ಷ ತೊರೆದಿದ್ದಾರೆ. ತನ್ನ ಕ್ಷೇತ್ರವಾದ ಜಾದವ್‌ಪುರದಲ್ಲಿ ತಮ್ಮ ಪಕ್ಷದ ಸ್ಥಳೀಯ ನಾಯಕತ್ವದ ಬಗ್ಗೆ ಅತೃಪ್ತಿ ಹೊಂದಿರುವುದಾಗಿ ಮಿಮಿ ಹೇಳಿದ್ದಾರೆ.
ಬಂಗಾಳಿ ಚಲನಚಿತ್ರ ನಟಿಯೂ ಆಗಿರುವ ಮಿಮಿ ಚಕ್ರವರ್ತಿ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಸಂಸದೆ ಸ್ಥಾನವನ್ನು ತ್ಯಜಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.
ಜಾದವ್‌ಪುರದಿಂದ ಮೊದಲ ಬಾರಿಗೆ ಸಂಸದೆಯಾಗಿರುವ ಚಕ್ರವರ್ತಿ ಅವರು, ಇಂದು ಮಧ್ಯಾಹ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಿಮಿ, "ಇಂದು, ನಾನು ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಫೆಬ್ರವರಿ 13 ರಂದು ನಾನು ಅವರಿಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ. ರಾಜಕೀಯ ಕಪ್ ಆಫ್ ಟೀ ಅಲ್ಲ ಎಂಬುದನ್ನು ನಾನು ಇಷ್ಟು ವರ್ಷಗಳಲ್ಲಿ ಅರ್ಥಮಾಡಿಕೊಂಡಿದ್ದೇನೆ ಎಂದರು.
ತಮ್ಮ ರಾಜೀನಾಮೆಯನ್ನು ನಿಯಮಾನುಸಾರ ಲೋಕಸಭೆ ಸ್ಪೀಕರ್‌ಗೆ ಸಲ್ಲಿಸುವ ಬದಲು ಮಮತಾ ಬ್ಯಾನರ್ಜಿಗೆ ಏಕೆ ಸಲ್ಲಿಸಿದ್ದೀರಿ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಿಮಿ, "ನಾನು ಟಿಎಂಸಿಯಿಂದ ಒಪ್ಪಿಗೆ ಪಡೆದ ನಂತರ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸುತ್ತೇನೆ" ಎಂದು ಹೇಳಿದರು.
ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಈ ಬೆಳವಣಿಗೆ ನಡೆದಿದೆ.