ಸಿಂಹ-ಸಿಂಹಿಣಿ (ಸಾಂಕೇತಿಕ ಚಿತ್ರ)
ಸಿಂಹ-ಸಿಂಹಿಣಿ (ಸಾಂಕೇತಿಕ ಚಿತ್ರ) TNIE
ದೇಶ

ಪಶ್ಚಿಮ ಬಂಗಾಳ: ಸಿಂಹ ಅಕ್ಬರ್ ಜೊತೆ ಸಿಂಹಿಣಿ ಸೀತಾ: ಕೋರ್ಟ್ ಮೆಟ್ಟಿಲೇರಿದ VHP

Srinivas Rao BV

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಸಫಾರಿ ಪಾರ್ಕ್ ಗೆ ತ್ರಿಪುರಾದಿಂದ ತಂದಿರುವ ಸೀತಾ ಎಂಬ ಸಿಂಹಿಣಿ ಹಾಗೂ ಅಕ್ಬರ್ ಎಂಬ ಸಿಂಹದ ಜೊತೆಗೆ ಇರಿಸಲಾಗಿದ್ದು ಈ ಬಗ್ಗೆ ವಿಹೆಚ್ ಪಿ ಕೋರ್ಟ್ ಮೆಟ್ಟಿಲೇರಿದೆ. ಸಿಂಹಿಣಿಯ ಹೆಸರನ್ನು ಬದಲಾವಣೆ ಮಾಡುವಂತೆ ಕೋಲ್ಕತ್ತ ಹೈಕೋರ್ಟ್ ಗೆ ವಿಹೆಚ್ ಪಿ ಮನವಿ ಮಾಡಿದೆ. ಈ ಎರಡೂ ಸಿಂಹಗಳನ್ನು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್ ನಿಂದ ಫೆಬ್ರವರಿ 12 ರಂದು ಪಶ್ಚಿಮ ಬಂಗಾಳಕ್ಕೆ ತರಲಾಗಿತ್ತು.

ಆದರೆ ಪಾರ್ಕ್ ನ ಅಧಿಕಾರಿಗಳು ಸಿಂಹಿಣಿಗೆ ಇಂತಹ ಯಾವುದೇ ಹೆಸರನ್ನೂ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಹೆಚ್ ಪಿಯ ಉತ್ತರ ಬಂಗಾಳ ವಿಭಾಗ ಫೆ.16 ರಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಫೆ.20 ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅಕ್ಬರ್ ಎಂಬ ಸಿಂಹದ ಜೊತೆ ಸೀತಾ ಎಂಬ ಸಿಂಹಿಣಿ ಇರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಆದ್ದರಿಂದ ಸಿಂಹಿಣಿಯ ಹೆಸರನ್ನು ಬದಲಾವಣೆ ಮಾಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಇದಷ್ಟೇ ಅಲ್ಲದೇ ಯಾವುದೇ ಝೂಲಾಜಿಕಲ್ ಪಾರ್ಕ್ ಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಪ್ರಾಣಿಗಳಿಗೆ ಧಾರ್ಮಿಕತೆಗೆ ಸಂಬಂಧಿಸಿದ ಹೆಸರುಗಳನ್ನು ನೀಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಬಂಗಾಳಿ ಸಫಾರಿ ಪಾರ್ಕ್‌ಗೆ ಕ್ರಮವಾಗಿ IL26 ಮತ್ತು IL27 ಎಂದು ಗುರುತುಗಳನ್ನು ಹೊಂದಿರುವ ಸಿಂಹ ಮತ್ತು ಸಿಂಹಿಣಿಗಳು ಆಗಮಿಸಿವೆ ಮತ್ತು ಸಿಂಹಿಣಿಗೆ "ಸೀತಾ" ಎಂದು ಹೆಸರಿಸಲಾಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಉತ್ತರ ಬಂಗಾಳ ಘಟಕ ತಿಳಿಸಿದೆ.

ಉದ್ಯಾನದ ಅಧಿಕಾರಿಗಳು ಎರಡು ಪ್ರಾಣಿಗಳಿಗೆ ಹೆಸರಿಸಿಲ್ಲ ಎಂದು ಪ್ರತಿಪಾದಿಸಿದರು ಮತ್ತು ಅಧಿಕೃತ ಹೆಸರಿಸುವಿಕೆಗಾಗಿ ಕಾಯಲಾಗುತ್ತಿದೆ.

SCROLL FOR NEXT