ವಿಕ್ರಂ ಸಿಂಗ್
ವಿಕ್ರಂ ಸಿಂಗ್ 
ದೇಶ

ಹಿಮಾಚಲ ಪ್ರದೇಶ: ಬಿಜೆಪಿಯ 15 ಶಾಸಕರ ಅಮಾನತು ಮಾಡಿದ ಸ್ಪೀಕರ್; ಸಚಿವ ವಿಕ್ರಮಾದಿತ್ಯ ಸಿಂಗ್ ರಾಜಿನಾಮೆ

Shilpa D

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಮೇಲಾಟಗಳ ನಡುವೆಯೇ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ ನಂತರ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿತ್ತು. ಆ ಬಳಿಕ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಸರ್ಕಾರದ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ಅತೃಪ್ತ ಶಾಸಕರಿಗೆ ಹುದ್ದೆ ನೀಡುವ ಮೂಲಕ ಸರ್ಕಾರದ ಉಳಿವಿಗೆ ಸಚಿವರು ಮುಂದಾಗಿದ್ದಾರೆ.

ಸುಖವಿಂದರ್ ಸಿಂಗ್ ಸುಖು ಸರ್ಕಾರವು ತನ್ನ ಸ್ವಂತ ಶಾಸಕರನ್ನು ಹಲವಾರು ಬಾರಿ ಅವಮಾನಿಸಿದೆ ಎಂದು ವಿಕ್ರಮಾದಿತ್ಯ ಸಿಂಗ್ ಆರೋಪಿಸಿದ್ದಾರೆ. ಅವಮಾನವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ ವಿಕ್ರಮಾದಿತ್ಯ, ಈಗ ಹಿಮಾಚಲದಲ್ಲಿ ಕಾಂಗ್ರೆಸ್ ಮುಂದಿನ ನಡೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಬಿಜೆಪಿಯ ಹರ್ಷ್ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಶಿಮ್ಲಾ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ವಿಕ್ರಮಾದಿತ್ಯ ಸಿಂಗ್, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ.

ಇನ್ನೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಸಭಾಧ್ಯಕ್ಷ ಕುಲದೀಪ್ ಸಿಂಗ್ ಅವರು, ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಸೇರಿ 15 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಬಳಿಕ, ಸದನದ ಕಲಾಪವನ್ನು ಮುಂದೂಡಿದ್ದಾರೆ.

ಜೈ ರಾಮ್ ಠಾಕೂರ್, ವಿಪಿನ್ ಪರ್ಮಾರ್, ರಣಧೀರ್ ಶರ್ಮಾ, ಹನ್ಸ್ ರಾಜ್, ವಿನೋದ್ ಕುಮಾರ್, ಜನಕ್ ರಾಜ್, ಬಲ್ಬೀರ್ ವರ್ಮಾ, ಲೋಕಿಂದರ್ ಕುಮಾರ್, ತ್ರಿಲೋಕ್ ಜಮ್ವಾಲ್, ಸುರಿಂದರ್ ಶೌರಿ, ಪುರನ್ ಚಂದ್, ದಲೀಪ್ ಠಾಕೂರ್, ಇಂದರ್ ಸಿಂಗ್ಬ್ ಗಾಂಧಿ, ರಣಬೀರ್ ನಿಕ್ಕ ಮತ್ತು ದೀಪ್ ರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.

ಸದನದಲ್ಲಿ ದುರ್ವರ್ತನೆ ಮತ್ತು ಘೋಷಣೆ ಕೂಗಿದ್ದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಅನ್ನು ಅಂಗೀಕರಿಸಲು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಬಹುದು ಎಂದು ನಾವು ಆತಂಕಗೊಂಡಿದ್ದೇವೆ’ಎಂದು ಠಾಕೂರ್ ಬೆಳಿಗ್ಗೆ ಸುದ್ದಿಗಾರರಿಗೆ ತಿಳಿಸಿದ್ದರು.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ರಾಜ್ಯಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಹಾಗಾಗಿ, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆಗೆ ಒತ್ತಾಯಿಸಿದ್ದರು.

SCROLL FOR NEXT