ರೈಲು ಅಪಘಾತದ ನಂತರ ದೃಶ್ಯ
ರೈಲು ಅಪಘಾತದ ನಂತರ ದೃಶ್ಯ  
ದೇಶ

ಜಾರ್ಖಂಡ್‌ ರೈಲು ಅಪಘಾತದಲ್ಲಿ ಮೃತ ಪ್ರಯಾಣಿಕರ ಸಂಖ್ಯೆ 12ಕ್ಕೆ ಏರಿಕೆ: ನಿಷ್ಪಕ್ಷಪಾತ ತನಿಖೆಗೆ ಖರ್ಗೆ ಆಗ್ರಹ

Sumana Upadhyaya

ರಾಂಚಿ: ಜಾರ್ಖಂಡ್‌ನ ಜಮ್ತಾರ ಜಿಲ್ಲೆಯಲ್ಲಿ ನಿನ್ನೆ ಬುಧವಾರ ಸಾಯಂಕಾಲ ಕಲಝಾರಿಯ ರೈಲು ನಿಲ್ದಾಣದ ಬಳಿ ರೈಲು ಡಿಕ್ಕಿಯಾಗಿ ಮೃತಪಟ್ಟ ಪ್ರಯಾಣಿಕರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಹಲವರು ಗಾಯಗೊಂಡಿದ್ದಾರೆ.

ರೈಲ್ವೆ ಪೊಲೀಸರು ಮತ್ತು ಸಿಬ್ಬಂದಿಗಳು ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಭಾಗಲ್ಪುರಕ್ಕೆ ತೆರಳುತ್ತಿದ್ದ ಆಂಗ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಸುದ್ದಿ ಸಿಕ್ಕಿದಾಗ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡು ಆತಂಕದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದಾರೆ. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಝಾಝಾ-ಅಸನೋಲ್‌ ರೈಲು ಪ್ರಯಾಣಿಕರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಇನ್ನು ರೈಲು ಡಿಕ್ಕಿಯಾದ ರಭಸಕ್ಕೆ 12 ಜನರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಾರು ಜನ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

“ಕಲಝಾರಿಯಾ ರೈಲು ನಿಲ್ದಾಣದ ಬಳಿ ರೈಲೊಂದು ಪ್ರಯಾಣಿಕರ ಮೇಲೆ ಹರಿದಿದೆ. ಕತ್ತಲು ಇದ್ದರೂ ರೈಲ್ವೆ ಸಿಬ್ಬಂದಿಯು ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದುವರೆಗೆ 12 ಜನ ಮೃತಪಟ್ಟಿರುವ ಶಂಕೆ ಇದೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯವಾಗಿದೆ. ಸಾವಿನ ಸಂಖ್ಯೆ ಇಷ್ಟೇ ಎಂದು ಈಗಲೇ ಹೇಳಲು ಆಗುವುದಿಲ್ಲ” ಎಂದು ಜಮ್ತಾರ ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ: ಜಾರ್ಖಂಡ್ ನ ಜಮ್ತಾರಾ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಪ್ರಾಣಹಾನಿ ಮತ್ತು ಗಾಯಗೊಂಡವರ ಬಗ್ಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.

"ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಅನೇಕ ಜನರ ಹಠಾತ್ ಸಾವಿನ ಸುದ್ದಿ ಅತ್ಯಂತ ದುಃಖಕರವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ: ಪ್ರಧಾನಮಂತ್ರಿ ನರೇಂದ್ರ ಅವರು ಟ್ವೀಟ್ ಮಾಡಿ, ಜಾರ್ಖಂಡ್‌ನ ಜಮ್ತಾರಾದಲ್ಲಿ ಸಂಭವಿಸಿದ ದುರ್ಘಟನೆಯಿಂದ ನೋವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಜನರ ದುಃಖದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬಯಸಿದ್ದಾರೆ.


'ನಿಷ್ಪಕ್ಷಪಾತ' ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡ್ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಬಗ್ಗೆ ಸಂತಾಪ ಸೂಚಿಸಿದ್ದು ರೈಲ್ವೆ ಪ್ರಯಾಣಿಕರ ಸುರಕ್ಷತೆ ಉಲ್ಲಂಘನೆಗಳಿಗೆ ಹೊಣೆಗಾರರಾಗಲು ಘಟನೆಯ ಬಗ್ಗೆ 'ನಿಷ್ಪಕ್ಷಪಾತ' ತನಿಖೆಗೆ ಒತ್ತಾಯಿಸಿದ್ದಾರೆ.

"ಜಾರ್ಖಂಡ್‌ನ ಜಮ್ತಾರಾದಲ್ಲಿ ಸಂಭವಿಸಿದ ರೈಲು ಅಪಘಾತವು ಅತ್ಯಂತ ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನಾವು ಪ್ರಾರ್ಥಿಸುತ್ತೇವೆ. ರೈಲ್ವೆ ಮತ್ತು ಸರ್ಕಾರಿ ಆಡಳಿತಗಳು ತಕ್ಷಣದ ಪರಿಹಾರ ಕಾರ್ಯಗಳನ್ನು ಮಾಡಬೇಕು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ರೈಲ್ವೆ ಸಚಿವಾಲಯವು ಈ ಭೀಕರ ಅಪಘಾತದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಸುರಕ್ಷತೆಯ ಲೋಪಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT