ದೇಶ

ಮೆಟ್ರೋ ರೈಲಿನಲ್ಲಿ ಸೀರೆ ಸಿಲುಕಿ ಮಹಿಳೆ ಸಾವು: ದೆಹಲಿ ಪೊಲೀಸರಿಂದ ಎಫ್ಐಆರ್

Srinivas Rao BV

ನವದೆಹಲಿ: ದೆಹಲಿ ಮೆಟ್ರೋ ರೈಲಿಗೆ ಸೀರೆ ಸಿಲುಕಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಇಂದ್ರಲೋಕ್ ಮೆಟ್ರೋ ನಿಲ್ದಾಣದಲ್ಲಿ 35 ವರ್ಷದ ಮಹಿಳೆಯೊಬ್ಬರ ಸೀರೆ ಸಿಲುಕಿ, ರೈಲು ಎಳೆದೊಯ್ದ ಪರಿಣಾಮ ಆಕೆ ಮೃತಪಟ್ಟಿದ್ದರು. 

ಸೆಕ್ಷನ್ 279 (ದುಡುಕಿನ ಚಾಲನೆ ಅಥವಾ ಸಾರ್ವಜನಿಕ ದಾರಿಯಲ್ಲಿ ಸವಾರಿ) ಸೆಕ್ಷನ್ 304A (ಅಜಾಗರೂಕತೆಯ ಪರಿಣಾಮ ಸಾವಿಗೆ ಕಾರಣವಾಗುವುದು) ರ ಅಡಿಯಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ (ಮೆಟ್ರೋ) ರಾಮ್ ನಾಯಕ್ ಎಫ್ಐಆರ್ ದಾಖಲಿಸಿರುವುದನ್ನು ಖಚಿತಪಡಿಸಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಪೊಲೀಸರು ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಯಾವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಮೇಲ್ನೋಟಕ್ಕೆ ಸಂತ್ರಸ್ತ ಮಹಿಳೆ ರೀನಾಳ ಬಟ್ಟೆ ರೈಲಿಗೆ ಸಿಲುಕಿ ಈ ದುರಂತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
 

SCROLL FOR NEXT