ದೇಶ

ಮಹುವಾ ಮೊಯಿತ್ರಾ ಉಚ್ಚಾಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ, ಮಾರ್ಚ್‌ನಲ್ಲಿ ಮುಂದಿನ ವಿಚಾರಣೆ

Lingaraj Badiger

ನವದೆಹಲಿ: ಕಳೆದ ತಿಂಗಳು ಸಂಸದ ಸ್ಥಾನದಿಂದ ತಮ್ಮನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಲೋಕಸಭೆ ಪ್ರಧಾನ ಕಾರ್ಯದರ್ಶಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ನೋಟಿಸ್ ಗೆ ಮೂರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

ಆದಾಗ್ಯೂ, ಲೋಕಸಭೆಯ ಕಲಾಪದಲ್ಲಿ ಭಾಗವಹಿಸಲು ಟಿಎಂಸಿ ನಾಯಕಿಗೆ ಅವಕಾಶ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಇದಕ್ಕೆ ಅನುಮತಿಸುವುದು ಮುಖ್ಯ ಅರ್ಜಿಯನ್ನು ಅನುಮತಿಸಿದಂತಾಗುತ್ತದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ, ಮಾರ್ಚ್ 11 ರಿಂದ ಲೋಕಸಭೆಯಿಂದ ಉಚ್ಚಾಟನೆ ವಿರುದ್ಧ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಲೋಕಸಭೆ ನೈತಿಕತೆಯ ಸಮಿತಿಗೆ ಯಾವುದೇ ನೋಟಿಸ್ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇಬ್ಬರನ್ನೂ ಮೊಯಿತ್ರಾ ಅವರು ತಮ್ಮ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ಏತನ್ಮಧ್ಯೆ, ಲೋಕಸಭೆ ಸೆಕ್ರೆಟರಿ ಜನರಲ್ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅಧಿಕೃತವಾಗಿ ನೋಟಿಸ್ ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು ಮತ್ತು ಮೊಯಿತ್ರಾ ಅವರ ಅರ್ಜಿಗೆ ಉತ್ತರ ಸಲ್ಲಿಸುವುದಾಗಿ ಹೇಳಿದರು.

SCROLL FOR NEXT