ದೇಶ

ಇಂಡೋ-ಕೆನಡಿಯನ್ನರಿಗೆ ಸುಲಿಗೆ ಕರೆ: ಕೇಂದ್ರ ಸರ್ಕಾರ ತೀವ್ರ ಕಳವಳ

Nagaraja AB

ನವದೆಹಲಿ: ಕೆನಡಾದಲ್ಲಿರುವ ಭಾರತೀಯ ಸಮುದಾಯದ ಕೆಲವರಿಗೆ 'ಸುಲಿಗೆ ಕರೆಗಳು ಬಂದಿವೆ ಎಂಬ' ವರದಿಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಜನರು ವಿಶೇಷವಾಗಿ ಭಾರತೀಯ ಪ್ರಜೆಗಳು ಸುಲಿಗೆ ಕರೆ ಸ್ವೀಕರಿಸುತ್ತಿರುವುದು ಗಂಭೀರ ಹಾಗೂ  ಕಳವಳಕಾರಿ ವಿಷಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭಾರತ ಮತ್ತು ಕೆನಡಾ ಚರ್ಚಿಸಲು ಹಲವಾರು ವಿಷಯಗಳಿವೆ. ದೇವಾಲಯದ ಮೇಲೆ ದಾಳಿ ನಡೆದಿರುವ ವಿಚಾರವಿತ್ತು. ದೇವಾಲಯದ ಆವರಣದಲ್ಲಿ ತನಿಖೆ ನಡೆಸಿದ ಕೆನಡಾ ಪೊಲೀಸರು, ಮಾನಸಿಕ ಅಸ್ವಸ್ಥ ವ್ಯಕ್ತಿ ದೇವಾಲಯದ ಒಳಗೆ ನುಗ್ಗಿರುವುದಾಗಿ ಹೇಳಿದ್ದಾರೆ. ಹಾಗಾಗಿ ಇಂತಹ ಸಮಸ್ಯೆಗಳು ನಡೆಯುತ್ತಲೇ ಇರುತ್ತವೆ ಎಂದರು. 

ವಕ್ತಾರರಾಗಿ ಜೈಸ್ವಾಲ್ ಅವರದು ಇದು ಮೊದಲ ಸುದ್ದಿಗೋಷ್ಠಿಯಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಇಂಡೋ-ಕೆನಡಿಯನ್ ಜನರಿಗೆ ಸುಲಿಗೆ ಮತ್ತು ಬೆದರಿಕೆ ಕರೆಗಳು ಬರುತ್ತಿರುವುದು ತೀವ್ರ ಕಳವಕಾರಿಯಾಗಿವೆ ಎಂದು ಅವರು ಹೇಳಿದರು.

ಇಂಡೋ-ಕೆನಡಿಯನ್ ಸಮುದಾಯದ ಸದಸ್ಯರ ಕೆಲವು ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ಬರುತ್ತಿರುವ ಸುಲಿಗೆಯ ವರದಿಗಳನ್ನು ತನಿಖೆ ಮಾಡಲು ಕೆನಡಾದಲ್ಲಿ ಕಾನೂನು ಜಾರಿ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಒಂಬತ್ತು ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೆನಡಾದ ಪೊಲೀಸರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಇತ್ತೀಚಿಗೆ ಕ್ಷೀಣಿಸದ್ದು, ಕೆನಡಾದಲ್ಲಿ  ಉಗ್ರರು ಮತ್ತು ಭಾರತ ವಿರೋಧಿಗಳಿಗೆ ನೆಲೆ ನೀಡಿರುವುದು ಪ್ರಮುಖ ವಿಷಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಈ ಹಿಂದೆ ಹೇಳಿದ್ದರು. 

SCROLL FOR NEXT