ದೇಶ

ಪ್ರಾಮಾಣಿಕತೆಯೇ ನನ್ನ ಆಸ್ತಿ, ಲೋಕಸಭೆ ಚುನಾವಣೆಗೆ ನಾನು ಪ್ರಚಾರ ನಡೆಸದಂತೆ ಮಾಡುವುದು ಬಿಜೆಪಿ ಗುರಿ: ಕೇಜ್ರಿವಾಲ್

Sumana Upadhyaya

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆದು ಅವರನ್ನು ಬಂಧಿಸುವ ಸಾಧ್ಯತೆ ವರದಿ ದಟ್ಟವಾಗಿದ್ದು, ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿ ದೆಹಲಿ ಸಿಎಂ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ನಡೆಸಿಲ್ಲ. ಬಿಜೆಪಿ ನನ್ನನ್ನು ಬಂಧಿಸಲು ಬಯಸಿದೆ. ನನ್ನ ದೊಡ್ಡ ಆಸ್ತಿ ನನ್ನ ಪ್ರಾಮಾಣಿಕತೆ, ಅವರು ನಾಶಮಾಡಲು ನೋಡುತ್ತಿದ್ದಾರೆ. ನನಗೆ ಸಮನ್ಸ್ ಕಳುಹಿಸಿರುವುದು ಕಾನೂನುಬಾಹಿರ ಎಂದು ನನ್ನ ವಕೀಲರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಉದ್ದೇಶ ನನ್ನ ತನಿಖೆಯಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ನನಗೆ ಅವಕಾಶ ಸಿಗದಂತೆ ಮಾಡುವುದು ಅವರ ಉದ್ದೇಶವಾಗಿದೆ. ತನಿಖೆಯ ನೆಪದಲ್ಲಿ ನನ್ನನ್ನು ಕರೆದು ನಂತರ ಬಂಧಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಅರವಿಂದ್ ಕೇಜ್ರಿವಾಲ್ ತನಿಖೆಗೆ ಸಹಕರಿಸುತ್ತಾರೆ: ದೆಹಲಿ ಮದ್ಯದ ಹಗರಣವು ನಕಲಿ ಎಂದು ಆಪ್ ನಾಯಕರು ಆರೋಪಿಸಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ "ಕಾನೂನು" ಸಮನ್ಸ್ ಕಳುಹಿಸಿದರೆ ಅವರು ಜಾರಿ ನಿರ್ದೇಶನಾಲಯ ತನಿಖೆಗೆ ಸಹಕರಿಸುತ್ತಾರೆ ಎಂದಿದ್ದಾರೆ. 

ಕೇಜ್ರಿವಾಲ್ ಅವರು ನಿನ್ನೆ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ನಿರಾಕರಿಸಿದರು, ಸಮನ್ಸ್ "ಅಕ್ರಮ" ಮತ್ತು "ರಾಜಕೀಯ ಪ್ರೇರಿತ" ಎಂದು ಟೀಕಿಸಿದ್ದರು.

ಈ ಬಗ್ಗೆ ಇಂದು ಮಾತನಾಡಿರುವ ಎಎಪಿ ನಾಯಕ ಜಾಸ್ಮಿನ್ ಶಾ, ಕಳೆದ ಎರಡು ವರ್ಷಗಳಿಂದ ಆಪಾದಿತ ಮದ್ಯ ಹಗರಣದ ತನಿಖೆ ನಡೆಯುತ್ತಿದೆ ಆದರೆ ಇದುವರೆಗೆ ಜಾರಿ ನಿರ್ದೇಶನಾಲಯ ಯಾವುದೇ ಸಾಕ್ಷಿ ಮುಂದಿಟ್ಟಿಲ್ಲ. ಮದ್ಯ ಹಗರಣ ಎಂದು ಕರೆಯಲ್ಪಡುವ ತನಿಖೆ ನಕಲಿಯಾಗಿದೆ. ಕಳೆದ ಎರಡು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಇಡಿ 500 ಕ್ಕೂ ಹೆಚ್ಚು ಸಾಕ್ಷಿಗಳನ್ನು ಕರೆದು 1,000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ ಆದರೆ ಇದುವರೆಗೆ ಸಾಕ್ಷಿಯಾಗಿ ಒಂದು ರೂಪಾಯಿಯನ್ನೂ ವಶಪಡಿಸಿಕೊಂಡಿಲ್ಲ ಎಂದು ಹೇಳಿದರು.

SCROLL FOR NEXT