ದೇಶ

ಪತ್ರಕರ್ತೆ ಜತೆ ಅನುಚಿತ ವರ್ತನೆ: ನಟ ಸುರೇಶ್ ಗೋಪಿಗೆ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು

Lingaraj Badiger

ತಿರುವನಂತಪುರಂ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾಧ್ಯಮ ಸಂವಾದದ ವೇಳೆ ಮಹಿಳಾ ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಬಿಜೆಪಿ ನಾಯಕ ಸುರೇಶ್ ಗೋಪಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಒಂದು ವೇಳೆ ಆರೋಪಿಯನ್ನು ಬಂಧಿಸಿದ್ದರೆ ಅವರಿಗೆ ಜಾಮೀನು ನೀಡುವಂತೆ ನ್ಯಾಯಮೂರ್ತಿ ಸೋಫಿ ಥಾಮಸ್ ಅವರು ಪೊಲೀಸರಿಗೆ ಸೂಚಿಸಿದ್ದಾರೆ.

ಸದ್ಯಕ್ಕೆ ಬಂಧಿಸುವಂತಹ ಯಾವುದೇ ಸಂದರ್ಭಗಳಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ ನಂತರ ಹೈಕೋರ್ಟ್ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಇದಕ್ಕೂ ಮುನ್ನ ನಡಕ್ಕಾವು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜಕಾರಣಿಯನ್ನು ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು.

ಮಹಿಳಾ ಪತ್ರಕರ್ತೆ ಘಟನೆಯ ವಿಡಿಯೋ ಸಹಿತ ಕೋಝಿಕ್ಕೋಡ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಸುರೇಶ್ ಗೋಪಿ ಅವರು, ವರದಿಗಾರರೊಂದಿಗೆ ಸಂವಾದದ ವೇಳೆ ಮಹಿಳಾ ಪತ್ರಕರ್ತೆ ಮೇಲೆ ಎರಡು ಬಾರಿ ಭುಜದ ಮೇಲೆ ಕೈ ಹಾಕುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಸಮಸ್ಯೆಗೆ ಸಿಲುಕಿದ್ದರು.

SCROLL FOR NEXT