ದೇಶ

ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ, ಪ್ರಧಾನಿ ಮೋದಿ ನಿಮಗೆ ಮನೆ ಕಟ್ಟಿಸಿ ಕೊಡುತ್ತಾರೆ: ರಾಜಸ್ಥಾನ ಸಚಿವ ಬಾಬುಲಾಲ್ ಖರಾಡಿ

Sumana Upadhyaya

ಜೈಪುರ: ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಮಗೆ ಮನೆ ಕಟ್ಟಿಸಿಕೊಡುತ್ತಾರೆ, ಹಾಗಾಗಿ ನಿಮಗೆ ಸಮಸ್ಯೆಯಾಗುವುದಿಲ್ಲ ಎಂದು ರಾಜಸ್ಥಾನದ ಸಚಿವ ಬಾಬುಲಾಲ್ ಖರಾಡಿ ಹೇಳಿದ್ದಾರೆ. 

ರಾಜಸ್ಥಾನದ ಬುಡಕಟ್ಟು ಪ್ರದೇಶ ಅಭಿವೃದ್ಧಿ ಸಚಿವ ಖಾರಾಡಿ, ಯಾರೂ ಹಸಿವಿನಿಂದ ಮಲಗಬಾರದು ಮತ್ತು ತಲೆಯ ಮೇಲೊಂದು ಸೂರು ಇರಬೇಕೆಂಬುದು ಪ್ರಧಾನಿ ಮೋದಿಯವರ ಆಶಯವಾಗಿದೆ ಎಂದರು. 

"ತಲೆಯ ಮೇಲೆ ಸೂರು ಇಲ್ಲದೆ ಯಾರೂ ಹಸಿವಿನಿಂದ ಮಲಗಬಾರದು ಎಂಬುದು ಪ್ರಧಾನಿಯವರ ಕನಸು. ನೀವು ಸಾಕಷ್ಟು ಮಕ್ಕಳಿಗೆ ಜನ್ಮ ನೀಡಿ,  ಪ್ರಧಾನಿಯವರು ನಿಮಗೆ ಮನೆ ಕಟ್ಟಿಸಿಕೊಡುತ್ತಾರೆ, ಮತ್ತೇನು ಸಮಸ್ಯೆ ನಿಮಗೆ ಎಂದು ಖಾರಾಡಿ ಅವರು ನಿನ್ನೆ ಉದಯಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಕೇಳಿದರು.

ಖಾರಾಡಿಯವರಿಗೆ ಇಬ್ಬರು ಪತ್ನಿಯರು, ಇಬ್ಬರು ಪತ್ನಿಯರಲ್ಲಿ ಎಂಟು ಮಕ್ಕಳು -- ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು. ಇಡೀ ಕುಟುಂಬವು ಉದಯಪುರದ ಕೋಟ್ಡಾ ತಹಸಿಲ್‌ನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ನೀಚಲಾ ತಾಲಾ ಗ್ರಾಮದಲ್ಲಿ ವಾಸಿಸುತ್ತಿದೆ.

ಖಾರಾಡಿಯವರು ಈ ಹೇಳಿಕೆ ನೀಡುತ್ತಿದ್ದಂತೆ ನೆರೆದಿದ್ದವರು ನಗೆಗಡಲಲ್ಲಿ ತೇಲಿದರು ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಒಬ್ಬರನ್ನೊಬ್ಬರು ನೋಡಿಕೊಂಡಿದ್ದು ಕಂಡುಬಂತು.

ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರವು ವಿವಿಧ ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದ ಖಾರಾಡಿ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಗೆ ಮತ ನೀಡುವಂತೆ ಜನರನ್ನು ಒತ್ತಾಯಿಸಿದರು.

SCROLL FOR NEXT