ದೇಶ

ರೈಲಿನಲ್ಲಿ ಎಲ್ಲಾ ಪ್ರಯಾಣಿಕರಿಗೂ ಶೇ.55 ರಷ್ಟು ವಿನಾಯಿತಿ ಸಿಗುತ್ತಿದೆ: ಅಶ್ವಿನಿ ವೈಷ್ಣವ್

Nagaraja AB

ಅಹಮದಾಬಾದ್:  ರೈಲಿನಲ್ಲಿ ಎಲ್ಲಾ ಪ್ರಯಾಣಿಕರಿಗೂ ಶೇ. 55 ರಷ್ಟು ವಿನಾಯಿತಿ ಕೊಟ್ಟಿದ್ದೀವಿ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹಿರಿಯ ನಾಗರಿಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಪೂರ್ವದಲ್ಲಿದ್ದ ದರ ವಿನಾಯಿತಿ ಪುನರ್ ಆರಂಭ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಸಚಿವರು, ಭಾರತೀಯ ರೈಲ್ವೆ ಈಗಾಗಲೇ ಎಲ್ಲಾ ಪ್ರಯಾಣಿಕರಿಗೆ ದರದಲ್ಲಿ ಶೇ. 55 ರಷ್ಟು ವಿನಾಯಿತಿ ನೀಡುತ್ತಿದೆ ಎಂದು ಹೇಳಿದರು. 

ಅಹಮದಾಬಾದ್‌ನಲ್ಲಿ ಬುಲೆಟ್ ರೈಲು ಯೋಜನೆ ಪ್ರಗತಿ ಪರಿಶೀಲನೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತಲುಪಬೇಕಾದ ಸ್ಥಳಕ್ಕೆ ಪ್ರತಿ ಟಿಕೆಟ್ ಗೆ 100 ರೂ. ವೆಚ್ಚವಾದರೆ, ರೈಲ್ವೆ ಕೇವಲ 45 ರೂ. ಮಾತ್ರ ವಿಧಿಸುತ್ತಿದೆ. ಶೇ. 55 ರಷ್ಟು ವಿನಾಯಿತಿಯನ್ನು ಎಲ್ಲಾ ಪ್ರಯಾಣಿಕರಿಗೂ ನೀಡುತ್ತಿದೆ ಎಂದರು. 

ಮಾರ್ಚ್ 2020 ರಲ್ಲಿ ಕೋವಿಡ್ ಲಾಕ್ ಡೌನ್ ಜಾರಿಗೂ ಮುನ್ನಾ ಹಿರಿಯ ನಾಗರಿಕರು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲು ದರದಲ್ಲಿ ಶೇ. 50 ರಷ್ಟು ವಿನಾಯಿತಿಯನ್ನು ರೈಲ್ವೆ ನೀಡುತಿತ್ತು. ಲಾಕ್‌ಡೌನ್ ಸಮಯದಲ್ಲಿ ರೈಲ್ವೇ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು ಆದರೆ ಜೂನ್ 2022 ರಲ್ಲಿ ಪೂರ್ಣ ಪ್ರಮಾಣದ ಸೇವೆ ಪುನರಾರಂಭವಾದಾಗ, ರೈಲ್ವೆ ಸಚಿವಾಲಯ ಈ ವಿನಾಯಿತಿಗಳನ್ನು ಪುನರ್ ಆರಂಭಿಸಲಿಲ್ಲ.

ಅಂದಿನಿಂದ ಸಂಸತ್ತಿನ ಉಭಯ ಸದನಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ಸಮಸ್ಯೆ ಕುರಿತು ಪ್ರಶ್ನಿಸಲಾಗುತಿತ್ತು. ರಾಜ್ಯಸಭೆ ಹಾಗೂ ರಾಜ್ಯಸಭೆಯ ವಿವಿಧ ಸಂದರ್ಭಗಳಲ್ಲಿ ಹಲವು ಸಂಸದರು ಈ ಕುರಿತು ಪ್ರಶ್ನೆ ಕೇಳಿದ್ದರೂ ಸಚಿವರು ಇದೇ ನಿಲುವು ಹೊಂದಿದ್ದರು. 

ಈ ಹಿಂದೆ ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಭಾರತೀಯ ರೈಲ್ವೇ 2022-23ರ ಹಣಕಾಸು ವರ್ಷದಲ್ಲಿ ಸರಿಸುಮಾರು 15 ಕೋಟಿ ಹಿರಿಯ ನಾಗರಿಕರಿಂದ ಸುಮಾರು 2,242 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಹೇಳಿತ್ತು. 

SCROLL FOR NEXT