ದೇಶ

ನಾಸಿಕ್: ಕಲಾರಾಮ ದೇವಾಲಯದ ಆವರಣ ಸ್ವಚ್ಛಗೊಳಿಸಿದ ಪ್ರಧಾನಿ ಮೋದಿ! ವಿಡಿಯೋ

Nagaraja AB

ನಾಸಿಕ್: ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಲಾರಾಮ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು. ಮೋದಿ ಅವರು ಮಾಪ್ ಸ್ಟಿಕ್ ಹಿಡಿದು, ಬಕೆಟ್‌ನೊಂದಿಗೆ ದೇವಾಲಯದ ನೆಲವನ್ನು ಒರೆಸುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು (ಸ್ವಚ್ಛತಾ ಅಭಿಯಾನ) ಕೈಗೊಳ್ಳುವಂತೆ ಪ್ರಧಾನಿ ಜನರಿಗೆ ಮನವಿ ಮಾಡಿದ್ದಾರೆ. 

ಇದಕ್ಕೂ ಮುನ್ನ ಕಲಾರಾಮ ಮಂದಿರದಲ್ಲಿ ದರ್ಶನ ಹಾಗೂ ಪೂಜೆ ಸಲ್ಲಿಸಿದರು. ಗೋದಾವರಿ ನದಿಯ ದಡದಲ್ಲಿರುವ ಶ್ರೀ ರಾಮ್ ಕುಂಡದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೋದಿ ಅವರು ರಾಮಾಯಣ ಮಹಾಕಾವ್ಯದ 'ಯುದ್ಧಕಾಂಡ' ಭಾಗವನ್ನು ಕೇಳಿದ್ದಾರೆ. ರಾಮನು ಅಯೋಧ್ಯೆಗೆ ಹಿಂದಿರುಗುವುದನ್ನು ಇದು ತಿಳಿಸುತ್ತದೆ. ಮರಾಠಿಯಲ್ಲಿ ಪ್ರಸ್ತುತಪಡಿಸಲಾಗಿದ್ದು,  AI ಅನುವಾದದ ಮೂಲಕ ಹಿಂದಿ ಆವೃತ್ತಿಯಲ್ಲಿ ಪ್ರಧಾನಿ ಆಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಹಲವಾರು ಪುರೋಹಿತರು ರಾಮ ಭಜನೆ ಹಾಡುತ್ತಿರುವಾಗ ಪ್ರಧಾನಮಂತ್ರಿಯವರು ಸಂಗೀತ ವಾದ್ಯವನ್ನು ನುಡಿಸುತ್ತಾ ದೇವಾಲಯದಲ್ಲಿ ನೆಲದ ಮೇಲೆ ಕುಳಿತಿರುವ ದೃಶ್ಯಗಳು ವೈರಲ್ ಆಗಿವೆ.

SCROLL FOR NEXT