ದೇಶ

ಕೇರಳದ ಗುರುವಾಯೂರು ದೇಗುಲದಲ್ಲಿ ಪ್ರಧಾನಿ ಮೋದಿ ತುಲಾಭಾರ, ನಟ-ರಾಜಕಾರಣಿ ಸುರೇಶ್ ಗೋಪಿ ಪುತ್ರಿ ವಿವಾಹದಲ್ಲಿ ಭಾಗಿ

Sumana Upadhyaya

ತ್ರಿಶೂರ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಕೇರಳ ರಾಜ್ಯದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಮಂತ್ರಿಯವರು 'ಮುಂಡು' ಮತ್ತು 'ವೇಷ್ಟಿ' (ಬಿಳಿ ಶಾಲು) ಸಾಂಪ್ರದಾಯಿಕ ಉಡುಪನ್ನು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಅವರು ನಟ ಹಾಗೂ ಬಿಜೆಪಿ ರಾಜಕಾರಣಿ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಸುರೇಶ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಇಂದು ಬೆಳಗ್ಗೆ 7.25ರ ಸುಮಾರಿಗೆ ಗುರುವಾಯೂರಿಗೆ ಆಗಮಿಸಿದ ಪ್ರಧಾನಮಂತ್ರಿಯವರು ಗುರುವಾಯೂರು ದೇವಸ್ವಂ ಮಂಡಳಿಯ ಶ್ರೀವಲ್ಸಂ ಅತಿಥಿಗೃಹದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ನಂತರ ದೇವಸ್ಥಾನಕ್ಕೆ ತೆರಳಿದರು. ಬಳಿಕ ಶ್ರೀಗುರುವಾಯೂರಪ್ಪನ ದೇವರಿಗೆ ಕಮಲದ ಹೂಗಳಿಂದ ತುಲಾಭಾರ ಅರ್ಪಿಸಿದರು. ಬೆಳಗ್ಗೆ 8.30ರ ಸುಮಾರಿಗೆ ದರ್ಶನ ಮುಗಿಸಿದ ಮೋದಿ ಅವರು ಗುರುವಾಯೂರಿನಲ್ಲಿ ವಿವಾಹವಾದ ಸುಮಾರು 20 ಜೋಡಿಗಳಿಗೆ ತಮ್ಮ ಆಗಮನ ಸಂದರ್ಭದಲ್ಲಿ ಶುಭ ಹಾರೈಸಿದರು. 

ಗುರುವಾಯೂರು ದೇವಸ್ಥಾನದ ಪೂರ್ವ ಪ್ರವೇಶ ದ್ವಾರದಲ್ಲಿರುವ ಮೊದಲ ಮಂಟಪದಲ್ಲಿ ಭಾಗ್ಯ ಸುರೇಶ್ ಅವರ ವಿವಾಹವು ಬೆಳಿಗ್ಗೆ 8.45 ಕ್ಕೆ ನಡೆದಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಧು-ವರರಿಗೆ ಹೂವಿನ ಹಾರಗಳನ್ನು ನೀಡಿದರು. ಬಳಿಕ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಕಲಾವಿದೊಂದಿಗೆ ಸಂವಾದ ನಡೆಸಿ ಆಶೀರ್ವದಿಸಿದರು.

ಮಲಯಾಳಂನ ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್ ಮತ್ತು ದಿಲೀಪ್ ಸೇರಿದಂತೆ ಹಲವು ಸೂಪರ್‌ಸ್ಟಾರ್‌ಗಳು ಹಾಜರಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಎಲ್ಲಾ ವಯಸ್ಸಿನ ಜನರು ಹೆಲಿಪ್ಯಾಡ್‌ನಲ್ಲಿ ಬಿಜೆಪಿ ಧ್ವಜಗಳನ್ನು ಬೀಸುತ್ತಾ ಪ್ರಧಾನಿಯವರನ್ನು ಸ್ವಾಗತಿಸಿದ್ದುದು ಕಂಡುಬಂತು. ಹೆಲಿಪ್ಯಾಡ್‌ನಿಂದ ಶ್ರೀವಲ್ಸಮ್ ಗೆಸ್ಟ್ ಹೌಸ್‌ಗೆ ತೆರಳಿದ ಪ್ರಧಾನಿ ಮೋದಿ ಅಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುವ ಮುನ್ನ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಬದಲಾಯಿಸಿಕೊಂಡರು.

ನಂತರ ಅವರು ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕೊಚ್ಚಿಗೆ ಹಿಂದಿರುಗುವ ಮೊದಲು ಅಲ್ಲಿ ಕೇಂದ್ರ ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೇರಳಕ್ಕೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ನಿನ್ನೆ ಮಂಗಳವಾರ ಸಂಜೆ ಕೇರಳಕ್ಕೆ ಆಗಮಿಸಿದ್ದರು.

SCROLL FOR NEXT