ದೇಶ

ಸರಣಿ ಸಾವುಗಳ ಬಳಿಕ ಕುನೋ ಪಾರ್ಕ್ ನಿಂದ ಸಿಹಿ ಸುದ್ದಿ; 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ

Srinivasamurthy VN

ಭೋಪಾಲ್: ಚೀತಾಗಳ ಸರಣಿ ಸಾವುಗಳಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕುನೋ ಪಾರ್ಕ್ ನಿಂದ ಮತ್ತೊಂದು ಸಿಹಿಸುದ್ದಿಯೊಂದು ಬಂದಿದ್ದು, ನಮೀಬಿಯಾದದಿಂದ ಹೆಣ್ಣು ಚೀತಾವೊಂದು 3 ಮರಿಗಳಿಗೆ ಜನ್ಮ ನೀಡಿದೆ.

ಹೌದು.. ಚೀತಾ ಮರುಪರಿಚಯ ಯೋಜನೆ (Cheetah Reintroduction Project)ಯಡಿಯಲ್ಲಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತಂದು ಮಧ್ಯ ಪ್ರದೇಶದ ಕುನೋ ಪಾರ್ಕ್ ನಲ್ಲಿ ಬಿಡಲಾಗಿದ್ದ ಚೀತಾಗಳ ಪೈಕಿ 10 ಚೀತಾಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದವು. ಚೀತಾಗಳ ಸರಣಿ ಸಾವಿನಿಂದಾಗಿ ಕೇಂದ್ರಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಭಾರತದಲ್ಲಿ ಯಶಸ್ಸಾಗುವುದಿಲ್ಲ ಎಂದು ಲೇವಡಿ ಮಾಡಲಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಕುನೋ ಪಾರ್ಕ್ ನಲ್ಲಿ ನಮೀಬಿಯನ್ ಚೀತಾವೊಂದು 3 ಮರಿಗಳಿಗೆ ಜನ್ಮ ನೀಡಿದೆ.

ಈ ಕುರಿತು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಟ್ವಿಟರ್ ನಲ್ಲಿ ಸುದ್ದಿ ಹಂಚಿಕೊಂಡಿದ್ದು, "ಕುನೋನ ಹೊಸ ಮರಿಗಳು! ನಮೀಬಿಯಾದ ಚೀತಾ ಜ್ವಾಲಾ ಮೂರು ಮರಿಗಳಿಗೆ ಜನ್ಮ ನೀಡಿದೆ. ನಮೀಬಿಯಾ ಚೀತಾ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳಲ್ಲಿ ಇದು ಬಂದಿದೆ. ದೇಶಾದ್ಯಂತ ಎಲ್ಲಾ ವನ್ಯಜೀವಿ ಮುಂಚೂಣಿ ಯೋಧರು ಮತ್ತು ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆಗಳು. ಭಾರತದ ವನ್ಯಜೀವಿಗಳು ಅಭಿವೃದ್ಧಿ ಹೊಂದಲಿ ಎಂದು ಟ್ವೀಟ್ ಮಾಡಿದ್ದಾರೆ.

ಜನವರಿ 3 ರಂದು ಕುನೊ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ನಮೀಬಿಯಾದ ಚೀತಾ ಆಶಾ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ವರದಿ ಮಾಡಿದ್ದರು. ಇದಕ್ಕೂ ಮುನ್ನ ಕಳೆದ ಮಾರ್ಚ್‌ನಲ್ಲಿ ಸಿಯಾಯಾ ಎಂಬ ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅವುಗಳಲ್ಲಿ ಒಂದು ಮಾತ್ರ ಬದುಕುಳಿದಿದ್ದು, ಮೂರು ಮರಿಗಳು ಸಾವನ್ನಪ್ಪಿದ್ದವು.

ಜ್ವಾಲಾ, ಆಶಾ ಮತ್ತು ಸಿಯಾಯಾ ಚೀತಾಗಳು ನಮೀಬಿಯಾದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಪ್ರಾಜೆಕ್ಟ್ ಚೀತಾ' ಅಡಿಯಲ್ಲಿ ಭಾರತಕ್ಕೆ ಸ್ಥಳಾಂತರಗೊಂಡಿವೆ. ಈ ಚೀತಾ ಯೋಜನೆ ಇದು ಸ್ವತಂತ್ರ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಮಾಂಸಾಹಾರಿ ಜಾತಿ ಅಂದರೆ ಚೀತಾಗಳನ್ನು ಮರು-ಪರಿಚಯಿಸುವ ಗುರಿಯನ್ನು ಹೊಂದಿದೆ. ಅದರಂತೆ ಎಂಟು ಚೀತಾಗಳ ಮೊದಲ ಬ್ಯಾಚ್ ಅನ್ನು ಸೆಪ್ಟೆಂಬರ್ 2022 ರಲ್ಲಿ ಭಾರತದಲ್ಲಿ ಪರಿಚಯಿಸಲಾಗಿತ್ತು. 12 ಚೀತಾಗಳ ಎರಡನೇ ಬ್ಯಾಚ್ ಅನ್ನು ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತಂದು ಬಿಡಲಾಗಿತ್ತು.
 

SCROLL FOR NEXT