ದೇಶ

'ನಾವು ಬ್ಯಾರಿಕೇಡ್ ಮುರಿದಿದ್ದೇವೆ, ಆದರೆ ಕಾನೂನು ಮುರಿಯುವುದಿಲ್ಲ; ಅಸ್ಸಾಂನಲ್ಲಿ ಸರ್ಕಾರ ರಚಿಸುತ್ತೇವೆ': ರಾಹುಲ್ ಗಾಂಧಿ

Sumana Upadhyaya

ಗುವಾಹಟಿ: ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮಂಗಳವಾರ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ತಡೆಹಿಡಿಯಲಾಗಿದ್ದು, ಇದನ್ನು ಖಂಡಿಸಿ ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಂತರ ನಗರದ ಹೊರವಲಯದಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆಯೇ ಹೊರತು ಕಾನೂನನ್ನು ಮುರಿಯುವುದಿಲ್ಲ ಎಂದು ಹೇಳಿದರು. 

ಯಾತ್ರೆ ನಗರ ವ್ಯಾಪ್ತಿಗೆ ಬರದಂತೆ ಎರಡು ಕಡೆ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯಲು ಬಲಪ್ರಯೋಗ ಮಾಡಬೇಕಾಯಿತು. ರಾಹುಲ್ ಗಾಂಧಿಯವರು ಇಂದು ಬೆಳಗ್ಗೆ ಗುವಾಹಟಿಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ದಾರಿಯಲ್ಲಿ ಕೆಲವು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ ದೊರೆಯಿತು. 

ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅದೇ ಮಾರ್ಗದಲ್ಲಿ ಸಾಗಿದ್ದು, ನಮಗೆ ಮಾತ್ರ ಯಾತ್ರೆ ಸಾಗಲು ಅವಕಾಶ ನೀಡಲಿಲ್ಲ ಎಂದರು. 

"ನಾವು ದುರ್ಬಲರು ಎಂದು ನೀವು ಭಾವಿಸಬಾರದು. ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ ಹೊರತು ಕಾನೂನು ಮುರಿದಿಲ್ಲ ಎಂದು ಅವರು ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. 

ವಿಶ್ವವಿದ್ಯಾನಿಲಯದಲ್ಲಿ ನನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ, ಆದರೆ ವಿದ್ಯಾರ್ಥಿಗಳು ನನ್ನ ಮಾತನ್ನು ಹೊರಗೆ ನಿಂತು ಕೇಳಿದರು ಎಂದರು. ಕಾಂಗ್ರೆಸ್ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ ಎಂದ ಅವರು, ಅಸ್ಸಾಂನಲ್ಲಿ ಬಿಜೆಪಿಯನ್ನು ಸೋಲಿಸಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ರಚಿಸುತ್ತೇವೆ ಎಂದು ಗುಡುಗಿದರು.

SCROLL FOR NEXT