ನವದೆಹಲಿ: ತನ್ನ ಜೀವನದಲ್ಲಾದ ದುರಂತದ ದುಃಖವನ್ನೇ ಧ್ಯೇಯೋದ್ದೇಶವಾಗಿ ಪರಿವರ್ತಿಸಿಕೊಂಡ ದೆಹಲಿಯ 26 ವರ್ಷದ ಯುವತಿ ಕಳೆದ 2 ವರ್ಷಗಳಿಂದ ಅನಾಥ ಶವಗಳಿಗೆ ಗೌರವದ ಮುಕ್ತಿ ನೀಡುತ್ತಿದ್ದಾರೆ.
ಹೌದು.. ದೆಹಲಿಯ ಶಹದಾರಾ ಪ್ರದೇಶದ ನಿವಾಸಿ ಪೂಜಾ ಶರ್ಮಾ ಆಸ್ಪತ್ರೆಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ಪ್ರಾಯಶಃ ಯಾವುದೇ ಕುಟುಂಬ ಸಂಬಂಧಗಳಿಲ್ಲದ ಹಲವಾರು ಶವಗಳ ಅಂತಿಮ ವಿಧಿಗಳನ್ನು ನಡೆಸುವ ಮೂಲಕ ಅವರಿಗೆ ಗೌರವಾನ್ವಿತ ವಿದಾಯ ಹೇಳುತ್ತಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪೂಜಾ ಶರ್ಮಾ, "ಕಳೆದ ಎರಡು ವರ್ಷಗಳಲ್ಲಿ, ಯಾವುದೇ ಕುಟುಂಬ ಅಥವಾ ಸಂಪರ್ಕಗಳಿಲ್ಲದ ಸುಮಾರು 4,000 ಶವಗಳ ಅಂತಿಮ ವಿಧಿಗಳನ್ನು ನಾನು ಮಾಡಿದ್ದೇನೆ. ಮಾರ್ಚ್ 13, 2022 ರಂದು ನಾನು ನನ್ನ ಸಹೋದರನನ್ನು ಕಳೆದುಕೊಂಡೆ. ಅಂದಿನಿಂದ, ನಾನು ನನ್ನ ದುರಂತವನ್ನು ಇತರರಿಗೆ ಸಾಂತ್ವನದ ಮೂಲವಾಗಿ ಪರಿವರ್ತಿಸಿದ್ದೇನೆ ಎಂದು ಹೇಳಿದರು.
ಅದೊಂದು ದುರಂತ ನನ್ನ ಜೀವನದ ದಿಕ್ಕನ್ನೇ ಬದಲಿಸಿದ ದುರಂತ ಘಟನೆಯ ಬಗ್ಗೆ ಬೆಳಕು ಚೆಲ್ಲಿದ ಪೂಜಾ ಶರ್ಮಾ, "ನನ್ನ 30 ವರ್ಷದ ಅಣ್ಣನನ್ನು ನನ್ನ ಎದುರೇ ಸಣ್ಣ ಜಗಳದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಈ ಸುದ್ದಿ ಕೇಳಿದ ನಂತರ ನನ್ನ ತಂದೆ ಕೋಮಾಕ್ಕೆ ಹೋದರು. ನನ್ನ ಸಹೋದರನ ಅಂತ್ಯ ಸಂಸ್ಕಾರ ಮಾಡಿದ 2 ದಿನಗಳ ಬಳಿಕ ನಾನು ಇದೇ ವಿಚಾರವಾಗಿ ಇತರರಿಗೆ ನೆರವು ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ThinkEdu 2024: ಉತ್ತರಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಸಾಂಸ್ಕೃತಿಕ ಭಿನ್ನತೆ- ಇತಿಹಾಸಕಾರ ಎಆರ್ ವೆಂಕಟಾಚಲಪತಿ
ಅಂದಿನಿಂದ ಅಂದರೆ ಸುಮಾರು 2 ವರ್ಷಗಳಿಂದ ಅನಾಥ ಶವಗಳನ್ನು ಆಸ್ಪತ್ರೆಗಳಿಂದ ಪಡೆದು ಅವುಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ದೇನೆ. ಆರಂಭದಲ್ಲಿ ಕುಟುಂಬಗಳು ಅಥವಾ ಎಲ್ಲಿವೆ ಎಂಬುದು ತಿಳಿದಿಲ್ಲದ ಮೃತದೇಹಗಳ ಬಗ್ಗೆ ಮಾಹಿತಿ ಪಡೆಯಲು ನಾನು ಪೊಲೀಸ್ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸುತ್ತಿದ್ದೆ. ಈಗ ಪೊಲೀಸರು ಮತ್ತು ಸರ್ಕಾರಿ ಆಸ್ಪತ್ರೆಗಳು ಹಕ್ಕು ಪಡೆಯದ ಶವದ ಬಗ್ಗೆ ಏನಾದರೂ ಮಾಹಿತಿಯಿದ್ದರೆ ನನ್ನನ್ನು ಸಂಪರ್ಕಿಸುತ್ತಿವೆ. ಎಂದು ಅವರು ಹೇಳಿದರು.
ಈ ದೇಹಗಳ ಅಂತಿಮ ಸಂಸ್ಕಾರಕ್ಕೆ ನನ್ನ ಅಜ್ಜನ ಪಿಂಚಣಿಯಿಂದ ಹಣದ ವ್ಯವಸ್ಥೆ ಮಾಡುತ್ತೇನೆ. ವಿಧಿಗಳನ್ನು ನೆರವೇರಿಸಲು ಸುಮಾರು 1,000 ರಿಂದ 1,200 ರೂ. ವೆಚ್ಚ ತಗುಲುತ್ತದೆ. ನಾನು ನನ್ನ ತಂದೆ ಮತ್ತು ಅಜ್ಜಿಯೊಂದಿಗೆ ಜೀವಿಸುತ್ತಿದ್ದು, ನನ್ನ ತಂದೆ ದೆಹಲಿ ಮೆಟ್ರೋದಲ್ಲಿ ಗುತ್ತಿಗೆ ಆಧಾರಿತ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೂಜಾ ಹೇಳಿಕೊಂಡಿದ್ದಾರೆ.