ದೇಶ

ಸಿಎಂ ಹೇಮಂತ್ ಸೊರೇನ್ ಗೆ ED ಬಂಧನದ ಭೀತಿ: ಕಲ್ಪನಾ ಸೊರೇನ್ ಜಾರ್ಖಂಡ್ ನ ನೂತನ ಸಿಎಂ?

Srinivas Rao BV

ರಾಂಚಿ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗುವ ಭೀತಿ ಎದುರಿಸುತ್ತಿರುವ ಜಾರ್ಖಂಡ್ ಸೊರೇನ್ ಅವರು ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾರೆ. 

ಈ ನಡುವೆ ಜಾರ್ಖಂಡ್ ನ ಆಡಳಿತಾರೂಢ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚ ತನ್ನ ಶಾಸಕರಿಗೆ ರಾಜಧಾನಿ ಆಗಮಿಸುವಂತೆ ಸೂಚನೆ ನೀಡಿದೆ.

ರಾಜ್ಯ ರಾಜಕಾರಣದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ನಿಶಾಂತ್ ದುಬೆ, ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ನೂತನ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.

ತಲೆಮರೆಸಿಕೊಂಡಿರುವ ಹೇಮಂತ್ ಸೊರೇನ್ ಹೇಗೆ ರಾಜ್ಯದ ಜನರನ್ನು ರಕ್ಷಿಸುತ್ತಾರೆ? ಎಂದು ಟ್ವಿಟರ್ ನಲ್ಲಿ ದುಬೆ ಪ್ರಶ್ನಿಸಿದ್ದಾರೆ.

ಸಿಎಂ ಸೊರೇನ್ ಅವರ ಆದೇಶದ ಮೇರೆಗೆ ತಪ್ಪು ಮಾಡುತ್ತಿರುವವರಿಗೆ ಒಂದು ದೊಡ್ಡ ಸಲಹೆ, ಸಿಎಂ ತಮ್ಮನ್ನು ತಾವೇ ತಪ್ಪಿತಸ್ಥರೆಂದು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ, ತನಿಖಾ ಸಂಸ್ಥೆಯನ್ನು ಎದುರಿಸಲಾಗದೇ ಪಲಾಯನ ಮಾಡಿದ್ದಾರೆ, ದೇಶ- ವಿದೇಶಗಳಲ್ಲಿ ಅವಮಾನ ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿ ಅಧಿಕಾರಿಗಳನ್ನು ಅಥವಾ ರಾಜ್ಯದ ಜನರನ್ನು ಹೇಗೆ ರಕ್ಷಿಸುವುದಕ್ಕೆ ಸಾಧ್ಯ? ಎಂದು ದುಬೆ ಪ್ರಶ್ನಿಸಿದ್ದಾರೆ.

"ಹೇಮಂತ್ ಸೋರೆನ್ ಅವರು ತಮ್ಮ ಜೆಎಂಎಂ, ಕಾಂಗ್ರೆಸ್ ಮತ್ತು ಮೈತ್ರಿಕೂಟದ ಶಾಸಕರನ್ನು ತಮ್ಮ ಲಗೇಜ್ ಮತ್ತು ಬ್ಯಾಗ್‌ಗಳೊಂದಿಗೆ ರಾಂಚಿಗೆ ತಲುಪಲು ಸೂಚಿಸಿದ್ದಾರೆ. ಮಾಹಿತಿಯ ಪ್ರಕಾರ, ಕಲ್ಪನಾ ಸೊರೆನ್ (ಹೇಮಂತ್ ಸೋರೆನ್ ಅವರ ಪತ್ನಿ) ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾಪವಿದೆ. ಎಂದು ದುಬೆ ಹೇಳಿದ್ದಾರೆ.

ಏತನ್ಮಧ್ಯೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ರಾಷ್ಟ್ರ ರಾಜಧಾನಿಯ ನಿವಾಸದಲ್ಲಿ ಕೆಲವು ದಾಖಲೆಗಳು, ಬಿಎಂಡಬ್ಲ್ಯು ಕಾರ್ ನ್ನು ವಶಕ್ಕೆ ಪಡೆದಿದ್ದಾರೆ. ಸೊರೇನ್ ತಲೆ ಮರೆಸಿಕೊಂಡಿದ್ದು, ಅವರ ಖಾಸಗಿ ವಿಮಾನ ದೆಹಲಿಯ ವಿಮಾನ ನಿಲ್ದಾಣದಲ್ಲಿದೆ. ಫೋನ್ ಆಫ್ ಆಗಿದ್ದು ಅಧಿಕಾರಿಗಳಿಗೆ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಯತ್ನಿಸುತ್ತಿದೆ. ಈ ಸಂಬಂಧ ಜನವರಿ 31 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಸಿಎಂ ಸೋರೆನ್ ಸಿದ್ಧರಾಗಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ.

“ಮುಖ್ಯಮಂತ್ರಿ ಅವರು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ ಮತ್ತು ಅವರು ಹಿಂತಿರುಗುತ್ತಾರೆ, ಅವರಿಗೆ ಜನವರಿ  ನಾವು ಜನವರಿ 31ಕ್ಕೆ ವಿಚಾರಣೆ ಎದುರಿಸಲು ಸಿದ್ಧರಿದ್ದೇವೆ. ನೀವು ನಮಗೆ ಸ್ಥಳ ಮತ್ತು ಸಮಯವನ್ನು ತಿಳಿಸಲು ನಮಗೆ ಕೇಳಿದ್ದೀರಿ ಮತ್ತು ನಾವು ನಿಮಗೆ ಸ್ಥಳವನ್ನು ಹೇಳಿದ್ದೇವೆ. ಕಂಕೆ ರಸ್ತೆಯಲ್ಲಿರುವ ಸಿಎಂ ಅವರ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆ ಸಿಎಂ ಹೇಳಿಕೆ ನೀಡಿ ವಿಚಾರಣೆ ಎದುರಿಸಲಿದ್ದಾರೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನೀಡಲಾಗಿದೆ. ಹಾಗಾದರೆ ಎಲ್ಲ ಗೊಂದಲಗಳನ್ನು ಸೃಷ್ಟಿಸುತ್ತಿರುವವರು ಯಾರು? ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತುತಪಡಿಸುತ್ತಿರುವ ರೀತಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ. 

SCROLL FOR NEXT