ದೇಶ

ಎಲ್ಎಸಿಯಲ್ಲಿ ಭಾರತೀಯ ಕುರಿಗಾಹಿಗಳು- ಚೀನಾ ಯೋಧರ ನಡುವೆ ವಾಗ್ವಾದ!

Srinivas Rao BV

ಲಡಾಖ್: ಲಡಾಖ್ ನ ಕಾಕ್ಜಂಗ್ ಪ್ರದೇಶದಲ್ಲಿ ಚೀನಾ ಯೋಧರು-ಕುರಿ ಗಾಹಿಗಳ ನಡುವೆ ವಾಗ್ವಾದ ಉಂಟಾಗಿರುವ ವೀಡಿಯೋ ವೈರಲ್ ಆಗಿದೆ. ಭಾರತದ ಪ್ರದೇಶದ ಮೇಲೆ ಚೀನಾ ಹಕ್ಕು ಸ್ವಾಮ್ಯ ಪ್ರತಿಪಾದನೆ ಮಾಡಲು ಯತ್ನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗತೊಡಗಿದೆ. 

ಎಲ್ಎಸಿ ಪ್ರದೇಶದಲ್ಲಿ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಚೀನಾ ಯೋಧರಿಗೆ ಸ್ಥಳೀಯರು ಸವಾಲು ಹಾಕಿದ್ದಾರೆ. 2020 ರ ಗಲ್ವಾನ್ ಘರ್ಷಣೆ ಬಳಿಕ ಈ ಪ್ರದೇಶಗಳಲ್ಲಿ ಸ್ಥಳೀಯ ಕುರಿಗಾಹಿಗಳು ಕುರಿ ಮೇಯಿಸುವುದನ್ನು ನಿಲ್ಲಿಸಿದ್ದರು.

ಈಗ ಕುರಿಗಾಹಿಗಳು ಇದು ಭಾರತದ ಪ್ರದೇಶ ಎಂದು ಪಿಎಲ್‌ಎ ಪಡೆಗಳೊಂದಿಗೆ ವಾದ ಮಾಡಿ ಪ್ರತಿಪಾದಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಜನಮನ ಗೆದ್ದಿದೆ.

LAC ಭಾರತೀಯ ಮತ್ತು ಚೀನಾದ ಪ್ರದೇಶಗಳನ್ನು ಪ್ರತ್ಯೇಕಿಸುವ ಗಡಿರೇಖೆಯಾಗಿದೆ. ಭಿನ್ನ ಗ್ರಹಿಕೆಗಳು ಎರಡೂ ಕಡೆಯ ಪಡೆಗಳ ನಡುವಿನ ವಿವಾದಗಳಿಗೆ ಕಾರಣವಾಗಿವೆ, ಕೆಲವು ಸಂದರ್ಭಗಳಲ್ಲಿ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿವೆ. ಈ ಬಾರಿ ಚೀನಾ ಸೈನಿಕರೊಂದಿಗಿನ ಸಂವಾದದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ.

PLA ನಮ್ಮ ಕುರಿಗಾಹಿಗಳನ್ನು ನಮ್ಮ ಪ್ರದೇಶದಲ್ಲಿ ಕುರಿ ಮೇಯಿಸುವುದರಿಂದ ತಡೆಯುತ್ತಿದೆ. ಗಡಿ ರೇಖೆಗೆ ಸಂಬಂಧಿಸಿದಂತೆ ಭಿನ್ನ ಗ್ರಹಿಕೆಗಳಿಂದಾಗಿ ಇದು ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ತೋರುತ್ತದೆ. ಆದರೆ ನಮ್ಮ ಭೂಮಿಯನ್ನು ರಕ್ಷಿಸಲು ಮತ್ತು ರಾಷ್ಟ್ರದ ಎರಡನೇ ರಕ್ಷಕ ಶಕ್ತಿಯಾಗಿ ನಿಲ್ಲುವ ನಮ್ಮ ಸ್ಥಳೀಯರಿಗೆ ನಾನು ನಮಸ್ಕರಿಸುತ್ತೇನೆ ಎಂದು ಚಿಶುಲ್ ಕೌನ್ಸಿಲರ್, ಕೊಂಚೋಕ್ ಸ್ಟಾಂಜಿನ್ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೋ ಸಹಿತ ಸಂದೇಶ ಪೋಸ್ಟ್ ಮಾಡಿದ್ದಾರೆ. ಗಡಿ ಭಾಗದಲ್ಲಿ ಕುರಿಗಾಹಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಪಡೆಗಳು ಯಾವಾಗಲೂ ಇರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ, ಅವರ ಬೆಂಬಲದಿಂದಾಗಿ ನಮ್ಮ ಅಲೆಮಾರಿಗಳು ಚೀನಾದ ಸೇನೆಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಯಿತು ಎಂದು ಪೋಸ್ಟ್ ನಲ್ಲಿ ಹೇಳಿದ್ದಾರೆ.

SCROLL FOR NEXT