ನವದೆಹಲಿ: ಮೋದಿ, ಬಿಜೆಪಿ, ಆರ್ ಎಸ್ಎಸ್ ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದ ಪರಿಕಲ್ಪನೆ, ಸಂವಿಧಾನ, ಸಂವಿಧಾನದ ಮೇಲಿನ ದಾಳಿಯನ್ನು ತಡೆಯಲು ಮುಂದಾದವರ ಮೇಲೆ ವ್ಯವಸ್ಥಿತ ಪೂರ್ಣಪ್ರಮಾಣದ ದಾಳಿಗಳು ನಡೆದಿವೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮಲ್ಲಿ ಹಲವರ ಮೇಲೆ ವೈಯಕ್ತಿಕ ದಾಳಿ ನಡೆದಿದೆ. ಇನ್ನೂ ಕೆಲವು ನಾಯಕರು ಜೈಲಿನಲ್ಲಿದ್ದಾರೆ. ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣ, ಬಡವರು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣದ ಕಲ್ಪನೆಯನ್ನು ವಿರೋಧಿಸಿದ ಯಾರಾದರೂ ಹತ್ತಿಕ್ಕಲ್ಪಟ್ಟರು.
ಗುರುನಾನಕ್, ಬುದ್ಧ, ಮಹಾವೀರ ಸೇರಿದಂತೆ ಭಾರತದಲ್ಲಿ ಯಾವುದೇ ಮಹಾಪುರುಷರ ಉದಾಹರಣೆ ನೋಡಿದರೂ ಅವರೆಲ್ಲರೂ ಅಹಿಂಸೆಯನ್ನು ಬೋಧಿಸಿದರು, ಹಿಂಸೆಯನ್ನು ವಿರೋಧಿಸಿದವರಾಗಿದ್ದಾರೆ. ಆದರೆ ಕೇಂದ್ರ ಸರ್ಕಾರದಲ್ಲಿರುವ, ಹಿಂದೂಗಳೆಂದು ಕರೆದುಕೊಳ್ಳುವವರು ಹಿಂದೂ ಧರ್ಮದ ಮೂಲಭೂತವಾದ ಅಂಶ ಅಹಿಂಸೆಗೆ ವಿರುದ್ಧವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ, ಬಿಜೆಪಿ, ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ಸದನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮಾಜವನ್ನು ಹಿಂಸೆಗೆ ಹೋಲಿಕೆ ಮಾಡುವುದು ಗಂಭೀರವಾದ ವಿಷಯ ಎಂದು ಹೇಳಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಮೋದಿ, ಬಿಜೆಪಿ, ಆರ್ ಎಸ್ಎಸ್ ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಹೇಳಿದ್ದಾರೆ.
"(ಮಹಾತ್ಮ) ಗಾಂಧಿ ಸತ್ತಿದ್ದಾರೆ ಮತ್ತು ಗಾಂಧಿಯವರು ಚಲನಚಿತ್ರದಿಂದ ಪುನರುಜ್ಜೀವನಗೊಂಡಿದ್ದಾರೆ ಎಂದು ಪ್ರಧಾನಿ ಹೇಳುತ್ತಾರೆ. ಈ ಅಜ್ಞಾನವನ್ನು ನೀವು ಅರ್ಥಮಾಡಿಕೊಳ್ಳುತ್ತೀರಾ?' ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ಅದು ಕೇವಲ ಒಂದು ಧರ್ಮವಲ್ಲ, ಎಲ್ಲಾ ಧರ್ಮಗಳು ಅಭಯದ ಬಗ್ಗೆ ಮಾತನಾಡುತ್ತವೆ ಎಂದು ಹೇಳಿದ್ದಾರೆ.
ತಮ್ಮ ಭಾಷಣದ ಸಮಯದಲ್ಲಿ, ರಾಹುಲ್ ಗಾಂಧಿಯವರು ಶಿವನ ಚಿತ್ರವನ್ನು ತೋರಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಸ್ಪೀಕರ್ ಓಂ ಬಿರ್ಲಾ, ಸದನದಲ್ಲಿ ಫಲಕಗಳನ್ನು ಪ್ರದರ್ಶಿಸಲು ನಿಯಮಗಳು ಅನುಮತಿಸುವುದಿಲ್ಲ ಎಂದು ತಿಳಿಸಿದರು.