ನವದೆಹಲಿ: ಸಂಸತ್ತಿನ ನಿಯಮಗಳು ಮತ್ತು ನಡವಳಿಕೆಯನ್ನು ಅನುಸರಿಸಲು ಹಿರಿಯ ಸದಸ್ಯರಿಂದ ಕಲಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಎನ್‌ಡಿಎ ಸಂಸದರಿಗೆ ಸಲಹೆ ನೀಡಿದ್ದಾರೆ.
ಇಂದು ಎನ್‌ಡಿಎ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೊದಲ ಬಾರಿಗೆ ಕಾಂಗ್ರೆಸ್ಸೇತರ ನಾಯಕರೊಬ್ಬರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿರುವುದರಿಂದ ಪ್ರತಿಪಕ್ಷಗಳು ತೀವ್ರ ಅಸಮಾಧಾನಗೊಂಡಿವೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಂಸದರಿಗೆ ಸಂಸತ್ತಿನ ವಿಷಯಗಳನ್ನು ಅಧ್ಯಯನ ಮಾಡಲು, ನಿಯಮಿತವಾಗಿ ಸಂಸತ್ತಿಗೆ ಹಾಜರಾಗಲು ಮತ್ತು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸುವಂತೆ ಮೋದಿ ಸೂಚಿಸಿದರು ಎಂದರು.
ಲೋಕಸಭೆಯಲ್ಲಿ ಸೋಮವಾರ ರಾಹುಲ್ ಗಾಂಧಿಯವರ ಭಾಷಣವನ್ನು ಮೋದಿ ಉಲ್ಲೇಖಿಸಿದ್ದಾರೆಯೇ ಎಂಬ ಪ್ರಶ್ನೆಗೆ, ರಿಜಿಜು ಅವರು ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ. ಆದರೆ ದೇಶದ ಪ್ರಧಾನಿ ಮಾತನಾಡಿದರೆ ಅದು ಎಲ್ಲರಿಗೂ ಸಂದೇಶವಾಗಿರುತ್ತದೆ ಎಂದು ಹೇಳಿರುವುದಾಗಿ ತಿಳಿಸಿದರು.
ಮೈತ್ರಿಕೂಟದ ಸಭೆಯಲ್ಲಿ, ಮೋದಿ ಅವರು "ಐತಿಹಾಸಿಕ" ಮೂರನೇ ಅವಧಿಗೆ ಪ್ರಧಾನಿಯಾಗಿದ್ದಕ್ಕೆ ಎನ್‌ಡಿಎ ನಾಯಕರು ಅವರನ್ನು ಅಭಿನಂದಿಸಿದರು ಎಂದು ರಿಜಿಜು ಹೇಳಿದರು.
ಮಾಧ್ಯಮಗಳ ಮುಂದೆ ಯಾವುದೇ ವಿಷಯದ ಬಗ್ಗೆ ಕಾಮೆಂಟ್ ಮಾಡುವ ಮುನ್ನ ವಿಷಯದ ಬಗ್ಗೆ ಸಂಪುರ್ಣ ತಿಳಿದುಕೊಂಡಿರಬೇಕು ಎಂದು ಪ್ರಧಾನಿ ಹೇಳಿದರು ಮತ್ತು ಸಂಸದರು ತಮ್ಮ ಕ್ಷೇತ್ರಗಳೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಮತ್ತು ಅವರ ಬೆಂಬಲಕ್ಕಾಗಿ ಮತದಾರರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಯಾವುದೇ ಪಕ್ಷದವರಾಗಿರಲಿ ರಾಷ್ಟ್ರ ಸೇವೆ ಎಂಬುದು ಪ್ರತಿಯೊಬ್ಬ ಸಂಸದನಿಗೂ ಮೊದಲ ಜವಾಬ್ದಾರಿಯಾಗಿರಬೇಕು, ಬೇರೆಯವರನ್ನು ಟೀಕಿಸುವ ಮುನ್ನ ವಿಷಯಗಳ ಅಧ್ಯಯನ ಮಾಡಬೇಕು ಎಂದು ಮೋದಿ ಸಂಸದರಿಗೆ ಸಲಹೆ ನೀಡಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಆಡಳಿತ ಪಕ್ಷದ ನಾಯಕರು ಕೋಮುವಾದದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ ಭಾಷಣದ ಹಲವು ಭಾಗಗಳನ್ನು ತೆಗೆದುಹಾಕಲಾಗಿದೆ. ಹಿಂದೂಗಳು ಮತ್ತು ಪಿಎಂ ನರೇಂದ್ರ ಮೋದಿ-ಬಿಜೆಪಿ-ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ರಾಹುಲ್ ಗಾಂಧಿ ವಿವಾದ ಸೃಷ್ಟಿಸಿದ್ದನ್ನು ಕಡತದಿಂದ ತೆಗೆದುಹಾಕಲಾಗಿದೆ.