ಹತ್ರಾಸ್ (ಉತ್ತರ ಪ್ರದೇಶ): ಎರಡು ದಿನಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಕಾಲ್ತುಳಿತಕ್ಕೆ ಬಲಿಯಾದ ಎಲ್ಲ ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಕುಮಾರ್ ತಿಳಿಸಿದ್ದಾರೆ.
ಮೊನ್ನೆ ಮಂಗಳವಾರ ಹತ್ರಾಸ್‌ನಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಭೋಲೆ ಅವರ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತ ದುರ್ಘಟನೆಯಲ್ಲಿ ಒಟ್ಟು 121 ಜನರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಮೃತಪಟ್ಟಿದ್ದರು.
ನಿನ್ನೆಯವರೆಗೆ ಮೂರು ಶವಗಳನ್ನು ಗುರುತಿಸಲಾಗಿರಲಿಲ್ಲ. ಅವುಗಳಲ್ಲಿ ಎರಡು ನಿನ್ನೆ ತಡರಾತ್ರಿ ಗುರುತಿಸಲಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಮಧ್ಯೆ ನಿನ್ನೆ ಅಲಿಗಢ ಆಸ್ಪತ್ರೆಯಲ್ಲಿ ವೀಡಿಯೊ ಕರೆ ಮೂಲಕ ಕುಟುಂಬವು ಒಂದು ದೇಹವನ್ನು ಗುರುತಿಸಿದ್ದು ಅವರಿಗೆ ಹಸ್ತಾಂತರಿಸಲಾಗುತ್ತಿದೆ.
ಧಾರ್ಮಿಕ ಕಾರ್ಯಕ್ರಮಕ್ಕೆ 80 ಸಾವಿರ ಜನರನ್ನು ಸೇರಿಸಲು ಅನುಮತಿ ಪಡೆಯಲಾಗಿತ್ತಾದರೂ 2 ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದೇ ಕಾಲ್ತುಳಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.