ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ರಾಜೀನಾಮೆ ನೀಡಿದ ನಂತರ ಗುರುವಾರ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರಿಗೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಆಹ್ವಾನ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಆರ್‌ಜೆಡಿ ನಾಯಕ ಸತ್ಯಾನಂದ್ ಭಕ್ತ ರಾಜಭವನ ಆಹ್ವಾನಿಸಿದ ಇತರ ನಾಯಕರಾಗಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಕೇವಲ ಐದು ತಿಂಗಳ ನಂತರ ಚಂಪೈ ಸೊರೆನ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೇಮಂತ್ ಸೊರೆನ್ ಅವರು ಮತ್ತೊಮ್ಮೆ ಜಾರ್ಖಂಡ್ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಈಗಾಗಲೇ ಆಡಳಿತಾರೂಢ ಮೈತ್ರಿಕೂಟ ಹೇಮಂತ್ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ.
''ಕೆಲವು ದಿನಗಳ ಹಿಂದೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ರಾಜ್ಯದ ಜವಾಬ್ದಾರಿ ನೀಡಲಾಗಿತ್ತು. ಈಗ ಹೇಮಂತ್ ಸೋರೆನ್ ಮರಳಿದ ನಂತರ ನಮ್ಮ ಮೈತ್ರಿಕೂಟ ಅವರಿಗೆ ಜವಾಬ್ದಾರಿ ನೀಡುವ ನಿರ್ಧಾರ ಕೈಗೊಂಡಿದೆ. ಹೇಮಂತ್ ಸೊರೆನ್ ಅವರನ್ನು ನಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದೆವು. ಈಗ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಚಂಪೈ ಸೊರೆನ್ ಸುದ್ದಿಗಾರರಿಗೆ ಹೇಳಿದ್ದಾರೆ.
ಫೆಬ್ರವರಿ 2 ರಂದು ರಾಜಭವನದಲ್ಲಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ಪ್ರಮಾಣ ವಚನ ಸ್ವೀಕರಿಸಿದ್ದರು.
ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಹೇಮಂತ್ ಸೊರೆನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ. ಸುಮಾರು ಐದು ತಿಂಗಳ ನಂತರ ಹೇಮಂತ್ ಸೊರೆನ್ ಅವರು ಜೂನ್ 28 ರಂದು ಬಿರ್ಸಾ ಮುಂಡಾ ಜೈಲಿನಿಂದ ಬಿಡುಗಡೆಯಾಗಿದ್ದರು.