ಪುಣೆ: ಪೋರ್ಷೆ ಕಾರು ಅಪಘಾದಲ್ಲಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣನಾಗಿದ್ದ ಎನ್ನಲಾದ 17 ವರ್ಷದ ಅಪ್ರಾಪ್ತ ಬಾಲ ನ್ಯಾಯ ಮಂಡಳಿ (JJB)ಯ ಜಾಮೀನು ಷರತ್ತುಗಳಿಗೆ ಅನುಗುಣವಾಗಿ ರಸ್ತೆ ಸುರಕ್ಷತೆಯ ಬಗ್ಗೆ 300 ಪದಗಳ ಪ್ರಬಂಧವನ್ನು ಬರೆದು ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪ್ರಾಪ್ತ ಮೊನ್ನೆ ಬುಧವಾರ ಜೆಜೆಬಿಗೆ ಪ್ರಬಂಧವನ್ನು ಸಲ್ಲಿಸಿದ್ದಾನೆ. ಬಾಂಬೆ ಹೈಕೋರ್ಟ್, ಕಳೆದ ತಿಂಗಳು ರಿಮಾಂಡ್ ಹೋಂನಲ್ಲಿರಿಸುವುದು ಕಾನೂನುಬಾಹಿರ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಕಳೆದ ಮೇ 19 ರಂದು ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದಲ್ಲಿ, ಬಾಲಕನನ್ನು ಪೋಷಕರು ಮತ್ತು ತಾತನ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿ ಇರಿಸಲು ಬಾಲ ನ್ಯಾಯ ಮಂಡಳಿ ಆದೇಶಿಸಿತ್ತು. ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧವನ್ನು ಬರೆಯಲು ಹೇಳಿತ್ತು.
ಪೋಲೀಸರ ಪ್ರಕಾರ, ಅಪ್ರಾಪ್ತನು ಕುಡಿದ ಅಮಲಿನಲ್ಲಿ ಪೋರ್ಷೆ ಕಾರನ್ನು ಚಲಾಯಿಸುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಸಾವಿಗೆ ಕಾರಣನಾಗಿದ್ದನು.
ಕರುಣೆ ಮೇಲೆ ಬಾಲಕನಿಗೆ ತ್ವರಿತ ಜಾಮೀನು ನೀಡಿದ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ, ಪೊಲೀಸರು ಜಾಮೀನು ಆದೇಶದ ತಿದ್ದುಪಡಿಯನ್ನು ಕೋರಿ JJB ಗೆ ಅರ್ಜಿ ಸಲ್ಲಿಸಿದ್ದರು. ಮೇ 22 ರಂದು, ಅಪ್ರಾಪ್ತ ವಯಸ್ಕನನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲು ಮಂಡಳಿಯು ಆದೇಶಿಸಿತ್ತು.
ಈ ಆದೇಶ ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿದ್ದು, ಬಾಲಾಪರಾಧಿಗಳಿಗೆ ಸಂಬಂಧಿಸಿದ ಕಾನೂನನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಒತ್ತಿಹೇಳಿತು.