ಸೂರತ್ : ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರ ನಡುವೆ ಗುಜರಾತ್ ನ ಸೂರತ್ ನಗರದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು ಓರ್ವ ವ್ಯಕ್ತಿ ಮೃತದೇಹ ಪತ್ತೆಯಾಗಿದ್ದರೆ, ಅವಶೇಷಗಳಡಿ ಹಲವರು ಸಿಲುಕಿರುವ ಸಾಧ್ಯತೆ ಇದೆ.
ಅವಶೇಷಗಳ ಅಡಿಯಿಂದ ಓರ್ವ ಮಹಿಳೆಯನ್ನು ಜೀವಂತವಾಗಿ ರಕ್ಷಿಸಲಾಗಿದ್ದು, 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
8 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಟ್ಟಡ ಇದಾಗಿದ್ದು, ಘಟನೆ ನಡೆದಾಗ ಕಟ್ಟಡದಲ್ಲಿ 5 ಕುಟುಂಬಗಳು ಇದ್ದವು, ಅವಶೇಷಗಳಡಿ ಹೆಚ್ಚಿನ ಮಂದಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ.
ಘಟನೆಯಲ್ಲಿ ಬದುಕಿ ಉಳಿದ ವ್ಯಕ್ತಿಯೋರ್ವರು ತೀವ್ರತೆಯನ್ನು ವಿವರಿಸುತ್ತಾ, "ಆರಂಭದಲ್ಲಿ ಕಟ್ಟಡ ಅಲುಗಾಡಲು ಆರಂಭಿಸಿತ್ತು. ನಾವು ಭೂಕಂಪ ಸಂಭವಿಸುತ್ತಿದೆ ಎಂದು ಭಾವಿಸಿದ್ದೆವು, ಹೊರಬಂದು ನೋಡಿದರೆ ಕಟ್ಟಡವೇ ಕುಸಿಯುತ್ತಿತ್ತು, ನಾವು ನಮ್ಮ ಕುಟುಂಬದವರು ಫ್ಲಾಟ್ ನಿಂದ ಹೊರಬಂದೆವು" ಎಂದು ಹೇಳಿದ್ದಾರೆ.
ಅವಶೇಷಗಳಡಿ ಸಿಲುಕಿರುವ ಅಪ್ರಾಪ್ತ ವಯಸ್ಕನ ಸಹೋದರ ಶುಭಂ ಸುದ್ದಿಗಾರರೊಂದಿಗೆ ಮಾತನಾಡಿ, "ಏನೋ ಬಡಿಗೆ ಬಡಿದಂತೆ ಶಬ್ದ ಕೇಳಿಸಿತು, ಆದರೆ ನಾನು ಆರಂಭದಲ್ಲಿ ಹೆಚ್ಚು ಯೋಚಿಸಲಿಲ್ಲ. ಶೀಘ್ರದಲ್ಲೇ, ಕಟ್ಟಡವು ಕುಸಿಯುತ್ತಿರುವುದನ್ನು ನಾನು ಅರಿತುಕೊಂಡೆ" ಎಂದು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಸುಮಾರು 8ವರ್ಷ ಹಳೆಯ ಕಟ್ಟಡ ಇದಾಗಿದ್ದು, ಕಟ್ಟಡವು ಹದಗೆಟ್ಟ ಸ್ಥಿತಿಯಲ್ಲಿತ್ತು ಮತ್ತು ಅನೇಕ ಅಪಾರ್ಟ್ಮೆಂಟ್ಗಳು ಖಾಲಿ ಇತ್ತು. ಸೂರತ್‌ನ ಜಿಲ್ಲಾಧಿಕಾರಿ ಡಾ. ಸೌರಭ್ ಪರ್ಘಿ, ನಾವು ಮೊದಲು ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದೇವೆ. ಬದುಕುಳಿದವರ ಪ್ರಕಾರ, ಇನ್ನೂ ನಾಲ್ಕೈದು ವ್ಯಕ್ತಿಗಳು ಒಳಗೆ ಸಿಲುಕಿರಬಹುದು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ, ಮುಂದಿನ ಕೆಲವು ಗಂಟೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಬಗ್ಗೆ ನಾವು ಆಶಾವಾದಿಗಳಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಇಂದು ರಾತ್ರಿಯೊಳಗೆ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲಾಗುವುದು ಎಂದು ಸೂರತ್‌ನ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾವು ಅವಶೇಷಗಳಿಂದ ಹೊರಹೊಮ್ಮುವ ಧ್ವನಿಯನ್ನು ಕೇಳಿದ್ದೇವೆ. ಒಂದು ಅಥವಾ ಎರಡು ಗಂಟೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದ್ದಾರೆ.