ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೊಂದು ಐಷಾರಾಮಿ ಕಾರು ಹಿಟ್-ಅಂಡ್-ರನ್ ಪ್ರಕರಣದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮುಂಬೈನ ವರ್ಲಿಯಲ್ಲಿ ಭಾನುವಾರ ಮುಂಜಾನೆ ದ್ವಿಚಕ್ರ ವಾಹನಕ್ಕೆ ಅತಿ ವೇಗದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು ಆಕೆಯ ಪತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿ ಹೊಡೆದ ನಂತರ ಐಷಾರಾಮಿ ಕಾರು ಮಹಿಳೆಯರನ್ನು 100 ಮೀಟರ್ ದೂರಕ್ಕೆ ಎಳೆದೊಯ್ದಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮುಂಬೈ ಪೊಲೀಸರ ಪ್ರಕಾರ, ಕೋಲಿವಾಡಾದ ದಂಪತಿಗಳು ಮೀನು ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೆಳಿಗ್ಗೆ 5: 30 ರ ಸುಮಾರಿಗೆ, ದಂಪತಿ ಆಟ್ರಿಯಾ ಮಾಲ್ ಬಳಿ ಬರುತ್ತಿದ್ದಾಗ ವೇಗವಾಗಿ ಬಂದ ಬಿಎಂಡಬ್ಲ್ಯು ಬೈಕ್‌ಗೆ ಹಿಂದಿನಿಂದ ಹೊಡೆದಿದೆ. ಪರಿಣಾಮ ದಂಪತಿ ಐಷಾರಾಮಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.
ಪತಿ ಚಲಿಸುವ ಕಾರಿನಿಂದ ನೆಗೆಯುವಲ್ಲಿ ಯಶಸ್ವಿಯಾಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಕಾವೇರಿ ನಕಾವಾ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಸ್ಥಳೀಯರು ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು ಪತಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರ್ಲಿ ಪೊಲೀಸರು ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದು ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಾರಿನ ಮಾಲೀಕರು ರಾಜೇಶ್ ಶಾ ಎಂದು ತಿಳಿದುಬಂದಿದ್ದು ಮಹಾರಾಷ್ಟ್ರ ಸಿಎಂ ಶಿಂಧೆ ಅವರ ಶಿವಸೇನೆ ಬಣದ ನಾಯಕ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಅಪಘಾದ ವೇಳೆ ಕಾರನ್ನು ರಾಜೇಶ್ ಶಾ ಅವರ ಪುತ್ರ ಓಡಿಸುತ್ತಿದ್ದ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಪುಣೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವೇಗವಾಗಿ ಕಾರು ಚಲಾಯಿಸಿ ಯುವ ಜೋಡಿ ಸಾವಿಗೆ ಕಾರಣವಾಗಿದ್ದು ಇದಾದ ಎರಡು ತಿಂಗಳ ಬಳಿಕ ಅದೇ ರೀತಿಯ ಮತ್ತೊಂದು ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದೆ.